ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಸಿಎಂಗೆ ವರಿಷ್ಠರಿಂದ ಬ್ರೇಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.28- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿಯಡಿಯೂರಪ್ಪ ಅವರು ಒಲವು ತೋರಿದ್ದರೂ, ವರಿಷ್ಟರು ಇನ್ನಷ್ಟು ದಿನಗಳ ಕಾಲ ಕಾದು ನೋಡುವ ತಂತ್ರ ಅನುಸರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆಗಸ್ಟ್ ಎಡರನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲು ಬಿಎಸ್‍ವೈ ಮುಂದಾಗಿದ್ದಾರೆ. ಹಾಲಿ ಸಂಪುಟದಲ್ಲಿ ಆರು ಸ್ಥಾನಗಳುಖಾಲಿ ಇದ್ದು, ಅಸಮಾಧಾನಗೊಂಡಿರುವ ಕೆಲವು ಶಾಸಕರನ್ನು ಸಂಪುಟಕ್ಕೆ ತೆಗೆದುಕೊಂಡು ಭಿನ್ನಮತಕ್ಕೆ ಅವಕಾಶ ನೀಡಬಾರದೆಂಬ ಲೆಕ್ಕಚಾರದಲ್ಲಿದ್ದಾರೆ.

ಹೀಗಾಗಿ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಬೆನ್ನಲ್ಲೇ 20 ಶಾಸಕರಿಗೆ ಯಾರೊಬ್ಬರು ನಿರೀಕ್ಷೆ ಮಾಡದ ರೀತಿಯಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಇದು ಮುಂದಿನ ಸಚಿವ ಸಂಪುಟ ವಿಸ್ತರಣೆ ಮುನ್ನುಡಿ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.

ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಂದಿದ್ದ ಸಚಿವ ಆರ್.ಶಂಕರ್, ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್, ಪಕ್ಷದ ವಿರುದ್ಧ ಆಗಾಗ್ಗೆ ಗುಟುರು ಹಾಕುತ್ತಿರುವ ಉಮೇಶ್ ಕತ್ತಿ ಹಾಗೂ ಪಕ್ಷ ಸೂಚಿಸಿದ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಲೆಕ್ಕಚಾರದಲ್ಲಿದ್ದಾರೆ ಬಿಎಸ್‍ವೈ.

ಬಹುತೇಕ ಪೂರ್ಣಮಟ್ಟದ ಸಂಪುಟ ವಿಸ್ತರಣೆಯಾದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷದ ನಂತರ ಕೆಲವರಿಗೆ ಸಂಪುಟದಿಂದ ಕೋಕ್ ನೀಡಿ ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಉಮೇದು ಬಿಎಸ್‍ವೈ ಅವರದ್ದು.

ಸಂಪುಟ ವಿಸ್ತರಣೆಯಾದರೆ ಮತ್ತೆ ಅಸಮಾಧಾನ ಸ್ಫೋಟಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿದ್ದಾರೆ.

# ಅನುಮತಿ ನೀಡುವುದೇ ಹೈಕಮಾಂಡ್:
ಬಿಎಸ್‍ವೈ ಅವರೇನೋ ಸಂಪುಟ ವಿಸ್ತರಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ದೆಹಲಿ ವರಿಷ್ಠರ ಅನುಮತಿಯಿಲ್ಲದೆ ಒಂದೂ ಹುಲ್ಲು ಕಡ್ಡಿ ಕೂಡ ಅಲುಗಾಡುವಂತಿಲ್ಲ. ಕೇಂದ್ರ ನಾಯಕರ ಅನುಮತಿ ಪಡೆದೇ ವಿಸ್ತರಣೆ ಮಾಡಬೇಕಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ದೆಹಲಿ ನಾಯಕರು ಕೂಡ ವಿಸ್ತರಣೆಗೆ ಅನುಮತಿ ನೀಡದೆ ಇನ್ನಷ್ಟು ಸತಾಯಿಸುವ ಲೆಕ್ಕಾಚಾರದಲ್ಲಿದ್ದಾರೆ. ಕರ್ನಾಟಕ ಸದ್ಯ ಅತಿಹೆಚ್ಚು ಕೋವಿಡ್ ಪೀಡಿತ ರಾಜ್ಯಗಳ ಪೈಕಿ 3ನೇ ಸ್ಥಾನದಲ್ಲಿದೆ.

ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ವಿರೋಧ ಪಕ್ಷಗಳಲ್ಲದೆ ಸಾರ್ವಜನಿಕರ ಕೆಂಗೆಣ್ಣಿಗೂ ಗುರಿಯಾಗಬೇಕಾಗುತ್ತದೆ ಎಂಬ ಅಳಕು ದೆಹಲಿ ನಾಯಕರದ್ದು.

ಹೀಗಾಗಿ ಬಿಎಸ್‍ವೈ ಎಷ್ಟೇ ಸರ್ಕಸ್ ನಡೆಸಿದರೂ ಸಂಪುಟ ವಿಸ್ತರಣೆಗೆ ಅಷ್ಟೂ ಸುಲಭವಾಗಿ ಹಸಿರು ನಿಶಾನೆ ತೋರುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಮೊದಲು ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಗಮನಕೊಡಿ. ನಂತರ ಸಚಿವ ಸಂಪುಟ ವಿಸ್ತರಣೆ ಮಾಡಿದರಾಯ್ತು ಎಂಬ ಸಬೂಬು ದೆಹಲಿಯಿಂದ ಬರಬಹುದು.

ಅಂದಹಾಗೆ ದೆಹಲಿ ನಾಯಕರು ಕೂಡ ಸಾಕಷ್ಟು ರಾಜಕೀಯ ಲೆಕ್ಕಾಚಾರ ಹಾಕಿಯೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಏಕಾಏಕಿ ಭಾನುವಾರ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೆಲವು ಶಾಸಕರನ್ನು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್‍ವೈ ನಾಯಕತ್ವ ಅಭಾದಿತ ಎಂದು ಹೇಳಲಾಗುತ್ತಿದೆಯಾದರೂ ಶಾಸಕರಲ್ಲಿ ಮಡುಗಟ್ಟಿರುವ ಅಸಮಾಧಾನ ಎಂದೂ ಸ್ಫೋಟಗೊಳ್ಳುತ್ತದೆಯೋ ಗೊತ್ತಿಲ್ಲ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಪೈಲೆಟ್ ವಿರುದ್ಧವೇ ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲೆಟ್ ತಿರುಗಿ ಬಿದ್ದಿರುವುದರಿಂದ ಅಲ್ಲಿನ ಸರ್ಕಾರದ ಪರಿಸ್ಥಿತಿ ಡೋಲಾಯಮಾನವಾಗಿದೆ.

ಹೀಗೆ ಇಲ್ಲಿ ಕೂಡ ಬಿಎಸ್‍ವೈ ವಿರುದ್ಧ ಇನ್ನುಕೆಲವು ಶಾಸಕರು ಅಸಮಾಧಾನಗೊಳ್ಳಲಿ ಎಂಬುದು ದೆಹಲಿ ನಾಯಕರ ಉದ್ದೇಶವಾಗಿದೆ.
ನಾಯಕತ್ವದ ವಿರುದ್ಧ ಶಾಸಕರ ಅಸಮಾಧಾನ ಹೆಚ್ಚಾದರೆ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಮಾಡಬೇಕಾಗುತ್ತದೆ ಎಂಬ ದೂರದೃಷ್ಟಿಯೂ ಇದರಲ್ಲಿ ಅಡಗಿದೆ ಎನ್ನಲಾಗುತ್ತಿದೆ.

ದೊಡ್ಡ ಮಟ್ಟದಲ್ಲಿ ಶಾಸಕರು ನಾಯಕತ್ವದ ವಿರುದ್ಧ ಬಂಡಾಯ ಸಾರಿದರೆ ಅನಿವಾರ್ಯವಾಗಿ ಸರ್ಕಾರ ಉಳಿಸಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ವರಿಷ್ಠರು ಸಿಲುಕುತ್ತಾರೆ.

ಇವೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಬಿಜೆಪಿ ವರಿಷ್ಠರು ಶಾಸಕರನ್ನು ಬಿಎಸ್‍ವೈ ನಾಯಕತ್ವದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ವ್ಯವಸ್ಥಿತವಾಗಿ ಹೆಣೆಯುತ್ತಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಇನ್ನು ಡೋಲಾಯಮಾನವಾಗಲಿದೆ.

Facebook Comments

Sri Raghav

Admin