ಹಳೆ ಮೈಸೂರು ಭಾಗದತ್ತ ಕಮಲ ಪಡೆ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ಕಾಂಗ್ರೆಸ್-ಜೆಡಿಎಸ್‍ನ ಭದ್ರಕೋಟೆ ಹಳೆ ಮೈಸೂರು ಭಾಗಕ್ಕೆ ನಿಧಾನವಾಗಿ ಲಗ್ಗೆಯಿಡಲು ಬಿಜೆಪಿ ಯತ್ನಿಸುತ್ತಿದೆ. ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಈ ಭಾಗದಲ್ಲಿ ತನ್ನ ಪ್ರಾಬಲ್ಯ ತೋರಿಸಲು ಪಕ್ಷ ಸಿದ್ದತೆ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ನಡೆದ ಬಿಜೆಪಿ ನೂತನ ಪದಾಕಾರಿಗಳ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಳೆ ಮೈಸೂರು ಭಾಗದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷದ ಪದಾಕಾರಿಗಳ ಸಭೆ ನಡೆಸಲಿದ್ದು, ಹಳೆ ಮೈಸೂರು ಸೇರಿದಂತೆ ಬಿಜೆಪಿ ಶಕ್ತಿ ಕಡಿಮೆಯಿರುವ ಕಡೆಗಳಲ್ಲಿ ಪ್ರಾಬಲ್ಯ ಮೆರೆಯಲು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಿದ್ದಾರೆ.

ತನ್ನ ಘಟಕವನ್ನು ಮರು ರಚನೆ ಮಾಡಿ ಬೂತ್ ಮಟ್ಟದ ಕಾರ್ಯಕರ್ತರನ್ನು ಕೆಲಸ ಮಾಡುವಂತೆ ಹುರಿದುಂಬಿಸಲು ನಾಯಕರು ಮುಂದಾಗಿದ್ದಾರೆ.

ಸದ್ಯ ಬಿಜೆಪಿಗೆ ಪಂಚಾಯತ್ ಅಥವಾ ವಾರ್ಡ್ ಮಟ್ಟದಲ್ಲಿ ಅಷ್ಟೊಂದು ಬೆಂಬಲ ವಿಲ್ಲ. ಬಿಜೆಪಿ 25 ಲೋಕಸಭಾ ಸ್ಥಾನ ಮತ್ತು ಕಳೆದ ಕೆಆರ್‍ಪೇಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆದ್ದಿದ್ದರೂ ಕೂಡ 69 ಕ್ಷೇತ್ರಗಳಲ್ಲಿ ಸಾಧನೆ ಕಳಪೆಯಾಗಿದೆ.

ಈ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ಕೊಡಬೇಕು ಎಂದು ನಡ್ಡಾ ಸಭೆಯಲ್ಲಿ ಹೇಳಿದ್ದರು.ಅಲ್ಲದೆ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರುವಂತೆ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತಮ್ಮ ಕೆಲಸ ಆರಂಭಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಬಲಗೊಳಿಸಲು ಮುಂದಾಗಿದ್ದಾರೆ.

ತವರು ಜಿಲ್ಲೆಯ ಮಂಡ್ಯ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಕರ್ನಾಟಕದ ಸಕ್ಕರೆ ಬಟ್ಟಲಿನ ಲಕ್ಷಾಂತರ ರೈತರ ಮನವನ್ನು ಗೆಲ್ಲಲು ಉತ್ಸುಕ ರಾಗಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ, ಮತ್ತು ಕೆಆರ್ ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಗಳು ಒಟ್ಟು ಮೂರು ಸಕ್ಕರೆ ಕಾರ್ಖಾನೆಗಳು ನಿಷ್ಕ್ರಿಯವಾಗಿದ್ದವು, ಇದರ ಸದುಪಯೋಗ ಪಡಿಸಿಕೊಂಡಿರುವ ಯಡಿಯೂರಪ್ಪ ರೈತ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ.

ವಿರೋಧ ಪಕ್ಷದವರ ಕಡು ವಿರೋಧದ ನಡುವೆಯೂ ಸಿಎಂ ಯಡಿಯೂರಪ್ಪ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ನೀಡಿ ದರು. ಬಿಜೆಪಿ ಶಾಸಕ ಹಾಗೂ ಯಡಿಯೂರಪ್ಪ ನಿಷ್ಠ ಮುರುಗೇಶ್ ನಿರಾಣಿಗೆ ಪಾಂಡವಪುರದ ಶ್ರೀರಾಮ್ ಕಾರ್ಖಾನೆಯನ್ನು ಗುತ್ತಿಗೆ ನೀಡಿದ್ದಾರೆ.

ಶ್ರೀರಂಗಪಟ್ಟಣ ಭಾಗದ ಕಬ್ಬು ಬೆಳೆಗಾರರು ಮತ್ತೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಮತ್ತೆ ಆರಂಭವಾಗಿದೆ, ಒಂದು ವರ್ಷದಲ್ಲಿ ಹೊಸ ಯಂತ್ರಗಳನ್ನು ಅಳವಡಿಸಲಾಗುವುದು, ಕಬ್ಬು ಬೆಳೆಗಾರರ ಸಮಸ್ಯೆ ಕೊನೆಗೊಳಿಸಲು ಮೈಶುಗರ್ ನಿಯೋಗ ರಚಿಸಲು ನಿರ್ಧರಿಸಿದ್ದಾರೆ.

ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು, ಪ್ರತಿಪಕ್ಷಗಳು ಯಾವುದೇ ವಿಷಯವನ್ನು ಪ್ರಸ್ತಾಪಿಸದಂತೆ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಬಿಜೆಪಿ ಪರ ಅಲೆ ಮೂಡುವಂತೆ ಮಾಡಿದ್ದಾರೆ.

ರಾಜ್ಯ ರಾಜಕೀಯದ ಮೇಲೆ ಈ ಸಕ್ಕರೆ ಕಾರ್ಖಾನೆ ನಿರ್ಧಾರ ಮಹತ್ವದ ಪರಿಣಾಮ ಬೀರಲಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಗಳನ್ನು ರೈತರ ಕಣ್ಣಿನಲ್ಲಿ ವಿಲ್ಲನ್ ಮಾಡಲಿದೆ, ಮಾಜಿ ಪಿಎಂ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭದ್ರಕೋಟೆಯಾದ ಹಾಸನ ಮತ್ತು ಮೈಸೂರಗಳನ್ನು ಕೈ ವಶ ಮಾಡಿಕೊಳ್ಳಲು ಬಿಜೆಪಿ ಸರಣಿ ಸಭೆ ನಡೆಸಿ ತಂತ್ರ ರೂಪಿಸುತ್ತಿದೆ.

Facebook Comments

Sri Raghav

Admin