ಉಪಚುನಾವಣೆ ಬೆನ್ನಲ್ಲೇ ಬಂಡಾಯದ ಕಹಳೆ ಓದಿದ ಬಿಜೆಪಿ ಮೂಲ ನಿವಾಸಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.23- ಉಪ ಚುನಾವಣೆ ಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರವನ್ನು ಗಟ್ಟಿಗೊಳಿಸಲು ಮುಂದಾಗಿರುವ ಬಿಜೆಪಿಗೆ ಪಕ್ಷದ ಮೂಲ ನಿವಾಸಿಗಳೇ ಬಂಡಾಯದ ಕಹಳೆ ಊದಲು ಮುಂದಾಗಿರುವುದು ಕಗ್ಗಂಟಾಗಿ ಪರಿಣಮಿಸಿದೆ.  ಸರಳ ಬಹುಮತಕ್ಕೆ ಬಿಜೆಪಿ ಕನಿಷ್ಟ 6 ಸ್ಥಾನಗಳನ್ನಾದರೂ ಗೆಲ್ಲಲೇಬೇಕು.

ಒಂದು ಸ್ಥಾನ ವ್ಯತ್ಯಾಸವಾದರೂ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಅಲುಗಾಡು ವುದು ಗ್ಯಾರಂಟಿ. ಹೀಗಾಗಿ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಟ 10ರಿಂದ 12 ಸ್ಥಾನಗಳನ್ನಾದರೂ ಗೆಲ್ಲುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ.

ಆದರೆ ಟಿಕೆಟ್ ಘೋಷಣೆಯಾಗುವ ಮುನ್ನವೇ ಬಿಜೆಪಿಯಲ್ಲಿ ಬಂಡಾಯದ ಕಾವು ಜೋರಾಗಿದ್ದು, ಟಿಕೆಟ್ ಕೈ ತಪ್ಪಿದರೆ ಆಕಾಂಕ್ಷಿಗಳು ಬಂಡಾಯ ಏಳಬಹುದೆಂಬ ಭೀತಿ ಪಕ್ಷದ ನಾಯಕರನ್ನು ಕಾಡುತ್ತಿದೆ. ಹುಣಸೂರು ಮತ್ತು ಕೆ.ಆರ್.ಪೇಟೆ ಹೊರತುಪಡಿಸಿದರೆ ಈಗ 13 ಕ್ಷೇತ್ರಗಳಲ್ಲಿ ಬಿಜೆಪಿಗೆ ಭಿನ್ನಮತೀಯರ ಮನವೊಲಿಸುವುದೇ ತಲೆನೋವಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆಆರ್‍ಪುರಂ ಹಾಗೂ ಶಿವಾಜಿನಗರದಲ್ಲಿ ಬಿಜೆಪಿಯ ಮೂಲ ನಿವಾಸಿಗಳು ತಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ನಮಗೆ ಟಿಕೆಟ್ ನೀಡುವಂತೆ ಚಿತ್ರನಟ ಜಗ್ಗೇಶ್ ಈಗಾಗಲೇ ಟ್ವಿಟರ್‍ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಕೆ.ಆರ್.ಪುರಂನಲ್ಲೂ ಮಾಜಿ ಶಾಸಕ ನಂದೀಶ್ ರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ನಂದೀಶ್ ರೆಡ್ಡಿ ಬಂಡಾಯದ ಕಹಳೆ ಊದುವುದು ಬಹುತೇಕ ಖಚಿತ. ಕೆ.ಆರ್.ಪುರಂನಲ್ಲಿ ಕಳೆದ ಒಂದು ದಶಕದಿಂದ ಅನರ್ಹ ಶಾಸಕ ಭೈರತಿ ಬಸವರಾಜ್ ವಿರುದ್ಧ ಜಿದ್ದಾಜಿದ್ದಿನ ರಾಜಕಾರಣ ಮಾಡಿರುವ ರೆಡ್ಡಿ ಈಗ ಭೈರತಿ ಪರವಾಗಿ ನಾನು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಟಿಕೆಟ್ ನೀಡದಿದ್ದರೆ ನಾನು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆಂಬ ಬೆದರಿಕೆಯನ್ನೂ ಒಡ್ಡಿದ್ದಾರೆ. ಮಹಾಲಕ್ಷ್ಮಿಲೇಔಟ್‍ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಕೂಡ ಬಿಜೆಪಿಯಿಂದ ಸ್ಪರ್ಧಿಸಲು ಕನಿಷ್ಟ ಪಕ್ಷ ಮೂರರಿಂದ ಐದು ಜನ ಆಕಾಂಕ್ಷಿಗಳಿದ್ದಾರೆ. ಮಾಜಿ ಶಾಸಕ ನೆ.ಲೆ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪಮೇಯರ್ ಎಸ್. ಹರೀಶ್, ಮುಖಂಡ ಎಂ.ನಾಗರಾಜ್ ಕೂಡ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ.

ಆದರೆ ಅನರ್ಹ ಶಾಸಕ ಗೋಪಾಲಯ್ಯ ಇಲ್ಲವೇ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಆಶ್ವಾಸನೆಯನ್ನು ಬಿಎಸ್‍ವೈ ಹಿಂದೆಯೇ ಕೊಟ್ಟಿರುವುದರಿಂದ ಇಲ್ಲಿ ಕೂಡ ಬಂಡಾಯದ ಕಾವು ಜೋರಾಗಿದೆ.ಶಿವಾಜಿನಗರದಿಂದ ಮಾಜಿ ಸಚಿವ ರೋಷನ್‍ಬೇಗ್ ತಮ್ಮ ಪುತ್ರ ರುಮೆನ್ ಬೇಗ್‍ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಎರಡು ಬಾರಿ ಸೋತಿದ್ದ ಬಿಜೆಪಿಯ ಪ್ರಬಲ ಆಕಾಂಕ್ಷಿಯ ನಿರ್ಮಲಕುಮಾರ್ ಸುರಾನ ಹಾಗೂ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ಕೂಡ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್‍ಗೆ ಟಿಕೆಟ್ ಕೊಡುವುದಕ್ಕೆ ಮಾಜಿ ಶಾಸಕ ಯು.ಬಿ.ಬಣಕಾರ್ ಕೂಡ ಬಂಡಾಯದ ಕಹಳೆ ಊದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಅವರು ತನಗೇ ಟಿಕೆಟ್ ನೀಡಬೇಕೆಂದು ಬಿಎಸ್‍ವೈಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಬಂಡಾಯ ಸಾರುವ ಸುಳಿವು ನೀಡಿರುವುದುಬಿಜೆಪಿಗೆ ತಲೆನೋವಾಗಿದೆ. ರಾಣೆ ಬೆನ್ನೂರಿ ನಲ್ಲೂ ಅನರ್ಹ ಶಾಸಕ ಆರ್. ಶಂಕರ್‍ಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಮೂಲ ಕಾರಣಕರ್ತ ಎನ್ನಲಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಅವರ ಸ್ವಕ್ಷೇತ್ರ ಗೋಕಾಕ್‍ನಲ್ಲೂ ಟಿಕೆಟ್ ನೀಡುವ ಕುರಿತಂತೆ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಅಶೋಕ್ ಪೂಜಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯು ರಮೇಶ್ ಜಾರಕಿಹೊಳಿಗೆ ಮಣೆ ಹಾಕಲು ಮುಂದಾಗಿರುವುದರಿಂದ ಅಶೋಕ್ ಪೂಜಾರ್ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.

ಅಥಣಿಯಲ್ಲೂ ಮಹೇಶ್ ಕುಮ್ಮಟಳ್ಳಿಗೆ ಅಂತಹ ಹೇಳಿಕೊಳ್ಳುವಂತಹ ವಿರೋಧ ಕೇಳಿಬಂದಿಲ್ಲವಾದರೂ ಉಪಮುಖ್ಯಮಂತ್ರಿ ಯಾಗಿರುವ ಲಕ್ಷ್ಮಣ್ ಸವದಿ ಪರಿಷತ್‍ನಿಂದ ಆಯ್ಕೆಯಾಗುವ ಬದಲು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಗವಾಡದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಅನರ್ಹ ಶಾಸಕ ಶ್ರೀಮಂತಪಾಟೀಲ ಬಜೆಪಿ ಮುಂದೆ ಬೇಡಿಕೆ ಇಟ್ಟಿದ್ದಾರೆ. ಪುತ್ರನಿಗೆ ಟಿಕೆಟ್ ನೀಡುವ ಆಶ್ವಾಸನೆ ಕೊಟ್ಟಿದ್ದರಿಂದಲೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಈ ಕ್ಷೇತ್ರದಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ರಾಜು ಕಾಗೇ ತಮಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ತಂತ್ರ ಅನುಸರಿಸಿದ್ದಾರೆ.

ವಿಜಯನಗರದಲ್ಲಿ ಮಾಜಿ ಶಾಸಕ ಗವಿಯಪ್ಪ ಬಿಜೆಪಿ ಆಕಾಂಕ್ಷಿಯಾಗಿದ್ದರೆ, ಅನರ್ಹ ಶಾಸಕ ಆನಂದ್ ಸಿಂಗ್ ತಮ್ಮ ಅಳಿಯ ಇಲ್ಲವೇ ಪುತ್ರನನ್ನು ಕಣಕ್ಕಿಳಿಸಲು ವೇದಿಕೆ ಸಿದ್ದಪಡಿಸಿದ್ದಾರೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿ ರುವ ಹೊಸಕೋಟೆ ಕ್ಷೇತ್ರದಿಂದ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅಖಾಡಕ್ಕೆ ಸಜ್ಜಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ವಿರುದ್ದ ಪರಾಭವಗೊಂಡಿದ್ದ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್ ಕೂಡ ಸೆಳೆಯಲು ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಕಳೆದ ಬಾರಿ ಪರಾಭವಗೊಂಡಿದ್ದ ವಿ.ಎಸ್. ಪಾಟೀಲ್ ಕೂಡ ಆಕಾಂಕ್ಷಿ. ಚಿಕ್ಕಬಳ್ಳಾಪುರ ದಲ್ಲಿ ಡಾ.ಸುಧಾಕರ್ ಇಲ್ಲವೇ ಅವರ ಕುಟುಂಬದವರಿಗೆ ಟಿಕೆಟ್ ನೀಡುವುದಕ್ಕೆ ಅಂತಹ ವಿರೋಧ ವ್ಯಕ್ತವಾಗುತ್ತಿಲ್ಲ. ಇದೇ ರೀತಿ ಹುಣಸೂರು ಮತ್ತು ಕೆ.ಆರ್.ಪೇಟೆಯಲ್ಲೂ ಬಿಜೆಪಿ ಸಂಘಟನೆ ದುರ್ಬಲವಾಗಿರುವುದರಿಂದ ಉಪಸಮರದಲ್ಲಿ ಆಕಾಂಕ್ಷಿಗಳು ಕೂಡ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.

Facebook Comments