ಕಮಲ ಪಾಳಯದಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಕಮಲ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ಕನಸು ಚಿಗುರಿಕೊಂಡಿದೆ. ಸೆ.13 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಈ ನಡುವೆಯೇ ರಾಷ್ಟ್ರ ರಾಜಧಾನಿ ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿರುವುದರಿಂದ ಉಳಿದ ನಾಲ್ಕು ಸಚಿವ ಸ್ಥಾನಗಳ ಭರ್ತಿ ಕುರಿತು ಹೈಕಮಾಂಡ್ ಜೊತೆಗೆ ಬೊಮ್ಮಾಯಿ ಅವರು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಳೆದ ಆಗಸ್ಟ್ 4ರಂದು ಸಂಪುಟ ರಚನೆ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 29 ಸಚಿವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದರು. ಇದೀಗ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಎರಡು ಡಜನ್ ಆಕಾಂಕ್ಷಿತ ಶಾಸಕರಿದ್ದಾರೆ. ಮೂಲಗಳ ಪ್ರಕಾರ, ಅಧಿವೇಶನ ಮುಗಿಯುವವರೆಗೂ ಸಂಪುಟ ವಿಸ್ತರಣೆ ಯಾಗುವುದು ಅನುಮಾನ ಎನ್ನಲಾಗುತ್ತಿದೆ. ಯಾರನ್ನೇ ತೆಗೆದುಕೊಂಡರೂ ಸಚಿವ ಸ್ಥಾನದ ವಂಚಿತರು ಮುನಿಸಿಕೊಳ್ಳಬಹುದು ಎಂಬ ಆತಂಕ ಸಿಎಂ ಅವರಿಗಿದೆ.

ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಸತೀಶ್‍ರೆಡ್ಡಿ, ಎಸ್.ಎ. ರಾಮದಾಸ್, ಪ್ರೀತಮ್‍ಗೌಡ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಸೋಮಶೇಖರರೆಡ್ಡಿ, ಕರುಣಾಕರರೆಡ್ಡಿ, ಅಪ್ಪುಗೌಡ ಪಾಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಂ.ಪಿ.ಕುಮಾರಸ್ವಾಮಿ, ಅಭಯ್ ಪಾಟೀಲ್ ಸೇರಿದಂತೆ ಎರಡು ಡಜನ್ ಶಾಸಕರು ಮಂತ್ರಿಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಸಂಪುಟ ರಚನೆಯಾದಾಗ ಸಚಿವ ಸ್ಥಾನ ವಂಚಿತರು ಮುನಿಸಿಕೊಂಡಿದ್ದರು. ಹೀಗಾಗಿ ಇರುವ ನಾಲ್ಕು ಸ್ಥಾನಗಳಿಗೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದೇ ಸಿಎಂಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಮಾಜಿ ಸಿಎಂ ಯಡಿ ಯೂರಪ್ಪ ಅವರ ಬೆಂಬಲಿತ ಶಾಸಕರು, ಮತ್ತೊಂದು ಕಡೆ ಸಂಘ ಪರಿವಾರ ಬೆಂಬಲಿತ ಶಾಸಕರು ಮಂತ್ರಿಸ್ಥಾನ ನೀಡ ಬೇಕೆಂದು ಪಟ್ಟು ಹಿಡಿದಿರುವುದು ಬಸವರಾಜ ಬೊಮ್ಮಾಯಿ ಅವರಿಗೆ ನುಂಗಲಾರದ ತುತ್ತಾಗಿದೆ.

ಪ್ರಸ್ತುತ ನವದೆಹಲಿಯಲ್ಲಿರುವ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸಂಪುಟಕ್ಕೆ ಮುಹೂ ರ್ತ ನಿಗದಿಪಡಿಸುವ ಸಾಧ್ಯತೆ ಇದೆ. ರಾಜಕೀಯ ಕಾರ್ಯದರ್ಶಿಗಳ ನೇಮಕ: ಮೂಲಗಳ ಪ್ರಕಾರ, ಸಂಪುಟದಲ್ಲಿ ಸ್ಥಾನ ಸಿಗದವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಬೇಕೆಂಬ ಚಿಂತನೆ ನಡೆದಿದೆ.

ಈ ಹಿಂದೆ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಸಚಿವ ಸ್ಥಾನ ಕೈತಪ್ಪಿದವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಇದೀಗ ಬೊಮ್ಮಾಯಿ ಅವರು ಕೂಡ ನಾಲ್ಕರಿಂದ ಐದು ಶಾಸಕರಿಗೆ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿಕೊಂಡು ಅಸಮಾಧಾನ ಹೋಗಲಾಡಿಸುವ ನಿರೀಕ್ಷೆ ಇದೆ.

ಏನೇ ಆದರೂ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಕ್ಷೀಣಿಸಿದೆ. ಶಾಸಕರು ಮುನಿಸಿಕೊಂಡರೆ ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಕ್ಷಣ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

Facebook Comments