ನಾಲಿಗೆ ಹರಿಬಿಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮ್ಯಾಂಡ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.23-ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ನಾಲಿಗೆ ಹರಿಬಿಡುತ್ತಿರುವ ಸಚಿವರು ಮತ್ತು ಶಾಸಕರು ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಬಿಜೆಪಿ ಸೂಚನೆ ಕೊಟ್ಟಿದೆ.  ಇನ್ನು ಮುಂದೆ ಪಕ್ಷದ ವಕ್ತಾರರು ಹಾಗೂ ಸಂಬಂಧಪಟ್ಟವರನ್ನು ಹೊರತುಪಡಿಸಿ ಉಳಿದವರು ಮುಜುಗರ ಉಂಟು ಮಾಡುವ ಹೇಳಿಕೆಗಳನ್ನು ನೀಡಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

ಕೆಲ ದಿನಗಳ ಹಿಂದೆ ಬಳ್ಳಾರಿನಗರ ಶಾಸಕ ಸೋಮಶೇಖರರೆಡ್ಡಿ ಹಾಗೂ ಇತ್ತೀಚೆಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಕೆಲವರು ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನು ಕೊಟ್ಟಿದ್ದರು. ಇದರಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಬಿಜೆಪಿ, ಪ್ರತಿಪಕ್ಷಗಳು ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ. ಹೀಗಾಗಿ ಮನಸೋ ಇಚ್ಛೆ ಮಾತನಾಡುವವರಿಗೆ ಕಡಿವಾಣ ಹಾಕಲು ತೀರ್ಮಾನಿಸಿದ್ದು , ಪಕ್ಷದ ಶಿಸ್ತು ಉಲ್ಲಂಘಿಸುವವರಿಗೆ ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರು ಮತ್ತು ಶಾಸಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಕ್ತಾರರು ಹಾಗೂ ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆಯವರು ಮಾತನಾಡಿದರೆ ಪಕ್ಷವು ಅದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಒಂದೆಡೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಮತ್ತಿತರರು ಶತಪ್ರಯತ್ನ ನಡೆಸುತ್ತಿದ್ದಾರೆ.

ಇದರ ನಡುವೆ ಕೆಲವರು ಅನಗತ್ಯವಾಗಿ ಗೊಂದಲಕಾರಿ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿರುವುದು ಬಿಜೆಪಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನಾವು ಹೇಳಿದಂತೆ ಕೇಳಬೇಕು. ನಕರ ಮಾಡಿದರೆ ಗೊತ್ತಲ್ಲ ಎಂದು ಬೆದರಿಕೆವೊಡ್ಡಿದ್ದರು.

ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಮಸೀದಿ ಹಾಗೂ ಮದರಸಾಗಳಲ್ಲಿ ಮಕ್ಕಳಿಗೆ ಭಯೋತ್ಪದಾನೆಗೆ ಉತ್ತೇಜನ ನೀಡುವಂತಹ ಶಿಕ್ಷಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದರ ಜೊತೆಗೆ ಮಸೀದಿಗಳಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಗೃಹ ಇಲಾಖೆ ಎಚ್ಚರ ವಹಿಸಬೇಕೆಂದು ಕಿಡಿ ಹೊತ್ತಿಸಿದ್ದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಹಿಂದೂ ಭಯೋತ್ಪಾದನೆಯೇ ಇಲ್ಲ ಎಂದು ಮತ್ತೊಂದು ವಿವಾದ ಸೃಷ್ಟಿಸಿದ್ದರು. ಹೀಗೆ ನಾಯಕರು ಸಾಲು ಸಾಲು ವಿವಾದಗಳನ್ನು ಸೃಷ್ಟಿಸುತ್ತಿರುವುದರಿಂದ ಬಿಜೆಪಿ ಇವರೆಲ್ಲರಿಗೂ ಕಡಿವಾಣ ಹಾಕಬೇಕೆಂಬ ತೀರ್ಮಾನಕ್ಕೆ ಬಂದಿದೆ.

Facebook Comments