ಫೋನ್ ಕದ್ದಾಲಿಕೆ ಮಾಡಿಸಿದ್ದರೇ ಕುಮಾರಸ್ವಾಮಿ..? ಭಾರಿ ಸದ್ದು ಮಾಡ್ತಿದೆ ವಿಶ್ವನಾಥ್ ಸಿಡಿಸಿದ ಬಾಂಬ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಫೋನ್ ಕದ್ದಾಲಿಕೆ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗುರಿಯಾಗುತ್ತಿದ್ದು, ಅನರ್ಹ ಶಾಸಕ ಎಚ್.ವಿಶ್ವನಾಥ್ ಸಿಡಿಸಿರುವ ಬಾಂಬ್ ನೆರೆ ಹಾವಳಿಯ ಸಂದರ್ಭದಲ್ಲಿ ಸುನಾಮಿಯಂತೆ ಅಪ್ಪಳಿಸಿದೆ.

ವಿಶ್ವನಾಥ್ ಅವರು ನೀಡಿರುವ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸಹಮತ ವ್ಯಕ್ತಪಡಿಸಿದ್ದು, ಟೆಲಿಫೋನ್ ಕದ್ದಾಲಿಕೆ ಮಹಾ ಅಪರಾಧ. ನಾನು ಆರು ತಿಂಗಳ ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಿದ್ದೆ ಎಂದಿದ್ದಾರೆ.

ಬಿಜೆಪಿ ನಾಯಕರು ಹಾಗೂ ಕೆಲವು ಪತ್ರಕರ್ತರ ಫೋನ್‍ಗಳು ಟ್ಯಾಪಾಗಿದ್ದವು. ಕದ್ದಾಲಿಕೆ ನಡೆದಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಈ ಕುರಿತು ಚರ್ಚೆ ಮಾಡಿದ್ದೇವೆ ಎಂದು ಅಶೋಕ್ ಹೇಳಿದ್ದಾರೆ.

ವಿಶ್ವನಾಥ್ ಅವರು ಮೈಸೂರಿನಲ್ಲಿ ಮಾತನಾಡಿ, ಬಂಡಾಯ ಶಾಸಕರ ಫೋನ್ ಕದ್ದಾಲಿಕೆಯಾಗಿದ್ದು, ನಮ್ಮ ಮಾತುಗಳನ್ನು ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡಲಾಗುತ್ತಿತ್ತು.

ಖಾಸಗಿ ತನಕ್ಕೆ ಧಕ್ಕೆ ತರಲಾಗಿತ್ತು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರೇ ಖುದ್ದಾಗಿ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ಹಲವು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಟೆಲಿಫೋನ್ ಕದ್ದಾಲಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆ ಬಗ್ಗೆ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದು ಜಾರಿಕೊಂಡಿದ್ದಾರೆ.

Facebook Comments

Sri Raghav

Admin