ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಸಭೆ ವಿಧಾನಸೌಧಕ್ಕೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.11- ಸಂಜೆ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಸಭೆಯನ್ನು ಶಕ್ತಿಸೌಧ, ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದೆ. ಬಿಜೆಪಿಯ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಿನ್ನೆ ನಿಗದಿಯಾಗಿದ್ದಂತೆ ಸಂಜೆ 5 ಗಂಟೆಗೆ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಬೇಕಿತ್ತು.

ಕಳೆದ ಎರಡು ದಿನಗಳಿಂದಲೂ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲೇ ಶಾಸಕಾಂಗ ಸಭೆ ನಡೆಸಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ, ಮುಂದೆ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಈ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು.

ಇಂದು ಸುಪ್ರೀಂಕೋರ್ಟ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಸಂಜೆ 6 ಗಂಟೆಯೊಳಗೆ ವಿಧಾನಸಭೆ ಸ್ಪೀಕರ್ ಅವರ ಮುಂದೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಿದೆ.

ಮುಂಬೈನಿಂದ ಅತೃಪ್ತ ಶಾಸಕರು ವಿಧಾನಸೌಧಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತು ಪ್ರಮುಖರು ಕೊನೆ ಕ್ಷಣದಲ್ಲಿ ಮನವೊಲಿಸಬಹುದು. ಇಲ್ಲವೇ ಅವರ ಮೇಲೆ ಹಲ್ಲೆ ನಡೆಸಬಹುದೆಂಬ ಮುನ್ನೆಚ್ಚರಿಕೆಯಿಂದ ಬಿಜೆಪಿ ಶಾಸಕಾಂಗ ಸಭೆಯನ್ನು ವಿಧಾನಸೌಧದಲ್ಲಿರುವ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಿದೆ.

ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಮುಂದೆ ಆಗಮಿಸಿದ ವೇಳೆ ಅಹಿತಕರ ಘಟನೆ ಸಂಭವಿಸಿದರೆ ಅವರ ರಕ್ಷಣೆಗೆ ಬಿಜೆಪಿಯ ಎಲ್ಲ ಶಾಸಕರು ನಿಲ್ಲಬೇಕೆಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಹೀಗಾಗಿಯೇ ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಶಾಸಕಾಂಗ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲು ಕೊನೆ ಕ್ಷಣದಲ್ಲಿ ತೀರ್ಮಾನಿಸಲಾಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin