ಮುಖ್ಯ ಸಚೇತಕ ಹುದ್ದೆಗೆ ಬಿಜೆಪಿ ಶಾಸಕರಲ್ಲಿ ಭಾರಿ ಪೈಪೋಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.13- ಇಂದು ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕರ ಆಯ್ಕೆ ನಡೆಯಲಿದೆ. ಸಂಜೆ 6.30ಕ್ಕೆ ನಗರದ ಖಾಸಗಿ ಹೋಟೆಲ್‍ನಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.

ಈ ಹಿಂದೆ ವಿಧಾನಸಭೆಯ ಮುಖ್ಯ ಸಚೇತಕರಾಗಿ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್‍ಕುಮಾರ್ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದಾರೆ. ಹಾಗಾಗಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಬಿಜೆಪಿಯಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕೊನೆ ಕ್ಷಣದಲ್ಲಿ ವಂಚಿತರಾಗಿದ್ದ ಶಾಸಕರಾದ ಸತೀಶ್ ರೆಡ್ಡಿ, ಅಭಯ್‍ಪಾಟೀಲ್, ವೀರಣ್ಣ ಚರಂತಿಮಠ, ಪಿ.ರಾಜೀವ, ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಪ್ರಮುಖರ ಹೆಸರುಗಳು ಕೇಳಿ ಬಂದಿವೆ. ಮುಖ್ಯಸಚೇತಕರ ಹುದ್ದೆ ಅತ್ಯಂತ ಪ್ರಮುಖ ಸ್ಥಾನವಾಗಿರುವುದರಿಂದ ಹಿರಿತನ, ಪಕ್ಷ ಸಂಘಟನೆ, ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ರೀತಿ ಇವೆಲ್ಲವನ್ನು ಪರಿಗಣಿಸಿಯೇ ನೀಡಲಾಗುತ್ತದೆ.

ನನಗೆ ಮುಖ್ಯಸಚೇತಕ ಇಲ್ಲವೇ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ಒಪ್ಪಿಕೊಳ್ಳುವುದಿಲ್ಲ. ಸಚಿವ ಸ್ಥಾನವನ್ನೇ ನೀಡಬೇಕೆಂದು ಅಭಯಪಾಟೀಲ್ ಕಡ್ಡಿಮುರಿದಂತೆ ಹೇಳಿದ್ದಾರೆ.ಇನ್ನು ಸತೀಶ್‍ರೆಡ್ಡಿ ಕೂಡ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿದ ಅವರು ಕೂಡ ಈ ಸ್ಥಾನವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗುತ್ತಿದೆ. ಅಂತಿಮವಾಗಿ ಪಕ್ಷ ಸೂಚನೆ ಕೊಟ್ಟರೆ ಒಪ್ಪಿಕೊಳ್ಳಲೇಬೇಕಾಗುತ್ತದೆ.

Facebook Comments