ಶತ್ರುಘ್ನ ಸಿನ್ಹಗೆ ಬಿಜೆಪಿ ಟಿಕೆಟ್ ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.17- ಪ್ರಧಾನನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಹಾಲಿ ಸಂಸದ ಮತ್ತು ಹಿರಿಯ ಅಭಿನೇತ ಶತ್ರುಘ್ನ ಸಿನ್ಹಾ ಅವರಿಗೆ ಈ ಬಾರಿ ಪಕ್ಷದ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ.

ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಿನ್ಹಾ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ. ಬದಲಿಗೆ ಆ ಕ್ಷೇತ್ರದಿಂದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸ್ಪರ್ಧಿಸುವುದು ಖಚಿತವಾಗಿದೆ.

ನಿನ್ನೆ ರಾತ್ರಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಉಪಸ್ಥಿತಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನೋಟು ಅಮಾನೀಕರಣ, ಜಿಎಸ್‍ಟಿ ಸೇರಿದಂತೆ ಮೋದಿ ಸರ್ಕಾರದ ನೀತಿಗಳ ವಿರುದ್ಧ ನಿರಂತರವಾಗಿ ಟೀಕಿಸುತ್ತಲೇ ಇರುವ ಸಿಡಿಗುಂಡು ಖ್ಯಾತಿಯ ಶತ್ರುಘ್ನರ ವಿರುದ್ಧ ಪಕ್ಷದ ನಾಯಕರು ಮೊದಲಿನಿಂದಲೂ ಕೆಂಡಕಾರುತ್ತಲೇ ಇದ್ದರು.

ಜನವರಿಯಲ್ಲಿ ನಡೆದ ಪ್ರತಿಪಕ್ಷಗಳ ರ್ಯಾಲಿಯಲ್ಲಿ ಸಿನ್ಹಾ ಪ್ರಧಾನ ಭಾಷಣಕಾರರಾಗಿ ಭಾಗವಹಿಸುವ ಮೂಲಕ ಬಿಜೆಪಿಗೆ ಮತ್ತಷ್ಟು ಮುಜುಗರ ಉಂಟು ಮಾಡಿದ್ದರು.

ಮೋದಿ ಮತ್ತು ಎನ್‍ಡಿಎ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುವ ಪರಿಪಾಠವನ್ನು ಪುನರಾವರ್ತಿಸುತ್ತಿರುವ ಬಿಜೆಪಿ ಹಿರಿಯ ನಾಯಕನ ವಿರುದ್ಧ ಪಕ್ಷದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.

Facebook Comments