ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಸಿಎಂ ಬೆಂಬಲಿಗರ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.1-ಬಹುನಿರೀಕ್ಷಿತ ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಅಳೆದು ತೂಗಿ ಪ್ರಕಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದು, ಪರಿಷ್ಕರಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಬೆಂಬಲಿಗರನ್ನು ಬಹುತೇಕ ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಪಕ್ಷ ನಿಷ್ಠರು ಹಾಗೂ ಸಂಘಪರಿವಾರದ ಹಿನ್ನೆಲೆಯುಳ್ಳವರಿಗೆ ಮಣೆ ಹಾಕಲಾಗಿದೆ.

ಮುಂಬಡ್ತಿ ನೀಡುವ ನೆಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಶೋಭಾ ಕರಂದ್ಲಾಜೆ, ಈವರೆಗೂ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ವೈ.ವಿಜೇಂದ್ರ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಬೇಕೆಂಬ ಸಿಎಂ ಮನವಿಗೆ ಪಕ್ಷ ಸೊಪ್ಪು ಹಾಕಿಲ್ಲ.

ಕೇವಲ ಕಣ್ಣೊರೆಸುವ ತಂತ್ರಕ್ಕಾಗಿ ವಿಜಯೇಂದ್ರ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರೆ, ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ತೆಂಗಿನಕಾಯಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮುಂದುವರೆಸಿದ್ದಾರೆ.

ತಮ್ಮ ಪುತ್ರನನ್ನು ಶತಾಯಗತಾಯ ಪ್ರಧಾನ ಕಾರ್ಯದರ್ಶಿ ಮಾಡಬೇಕೆಂದು ಬಿಎಸ್‍ವೈ ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿದ್ದರು. ಸದ್ಯ ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ಎನ್.ರವಿಕುಮಾರ್ ಮಾತ್ರ ಇದ್ದಾರೆ.

ಯಡಿಯೂರಪ್ಪ ಬಣದಲ್ಲಿ ರವಿಕುಮಾರ್ ಗುರುತಿಸಿಕೊಂಡಿದ್ದರೂ ಮೂಲತಃ ಎಬಿವಿಪಿ ಹಿನ್ನೆಲೆಯಿಂದ ಬಂದವರು. ಪದಾಧಿಕಾರಿಗಳ ಪಟ್ಟಿಯಲ್ಲಿ ಬಿಎಸ್‍ವೈ ತಮ್ಮ ಆಪ್ತರಿಗೆ ಸ್ಥಾನಮಾನ ಕಲ್ಪಿಸಲು ಮುಂದಾಗಿದ್ದರು.

ಆದರೆ ಪಟ್ಟಿಯಲ್ಲಿ ಎಂದಿನಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ. ಜಾತಿ, ಪ್ರದೇಶವಾರು, ಅನುಭವ, ಸಂಘಟನೆ ಸಾಮಥ್ರ್ಯ, ಜನರ ಜೊತೆಗಿನ ಒಡನಾಟ ಎಲ್ಲವನ್ನೂ ಪರಿಗಣಿಸಿ ಸ್ಥಾನಮಾನ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳಲಾಗುತ್ತದೆ.

ವಾಸ್ತವವಾಗಿ ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಬೆಂಬಲಿಗರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ತಮ್ಮ ನಾಯಕನ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಜಿಲ್ಲಾಧ್ಯಕ್ಷರು, ವಿವಿಧ ಮೋರ್ಚಾ, ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಪ್ರಮುಖ ಹುದ್ದೆಗಳಲ್ಲಿ ತಮ್ಮ ಬೆಂಬಲಿಗರ ಹಿತ ಕಾಪಾಡಲು ಬಿಎಸ್‍ವೈ ಮುಂದಾಗಿದ್ದರು. ಇದೀಗ ಹಂತ ಹಂತವಾಗಿ ಯಡಿಯೂರಪ್ಪ ಬೆಂಬಲಿಗರನ್ನು ಮೂಲೆಗುಂಪು ಮಾಡುವ ಪ್ರಯತ್ನ ಮುಂದುವರೆದಿದೆ.

ಸರ್ಕಾರ ರಚನೆ, ಸಂಪುಟಕ್ಕೆ ಸೇರ್ಪಡೆ, ವಿಧಾನಸಭೆ ಸ್ಪೀಕರ್ ಆಯ್ಕೆ, ರಾಜ್ಯಸಭೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ, ವಿಧಾನಪರಿಷತ್‍ಗೆ ನಾಮಕರಣ ಸೇರಿದಂತೆ ಹೀಗೆ ಪ್ರತಿಯೊಂದು ಆಯ್ಕೆಯಲ್ಲೂ ಯಡಿಯೂರಪ್ಪನವರಿಗೆ ಉದ್ದೇಶಪೂರ್ವಕವಾಗಿ ಹಿನ್ನಡೆ ಉಂಟು ಮಾಡಲಾಗುತ್ತಿದೆ.

ಹೀಗಾಗಿ ತಮಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಅಧ್ಯಕ್ಷರು ಹಾಗೂ ವರಿಷ್ಠರ ಜೊತೆ ಚರ್ಚಿಸಿ ಕೆಲವು ಹೆಸರುಗಳನ್ನು ಬದಲಾವಣೆ ಮಾಡಬೇಕೆಂದು ಯಡಿಯೂರಪ ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ.

ಸದ್ಯ ಸರ್ಕಾರ ಸುಗಮವಾಗಿ ನಡೆಯುತ್ತಿರುವುದರಿಂದ ಗೊಂದಲ ಉಂಟು ಮಾಡಬಾರದೆಂಬ ಕಾರಣಕ್ಕಾಗಿ ಸಿಎಂ ಕೂಡ ಮೌನಕ್ಕೆ ಶರಣಾಗಿದ್ದಾರೆ. ಆದರೆ ಬೆಂಬಲಿಗರು ಮಾತ್ರ ಪಟ್ಟು ಸಡಿಲಿಸುತ್ತಿಲ್ಲ. ಮುಂದೆ ನಡೆಯುವ ವಿದ್ಯಮಾನಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Facebook Comments

Sri Raghav

Admin