ಕೋರ್ ಕಮಿಟಿ ಸಭೆ ಹಿನ್ನಲೆ ಸಿಎಂ ಮೇಲೆ ಸಚಿವಾಕಾಂಕ್ಷಿಗಳ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.2- ಇಂದು ಸಂಜೆ ಬಹುನಿರೀಕ್ಷಿತ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಉಸ್ತುವಾರಿಯವರ ಜೊತೆ ಚರ್ಚೆ ನಡೆಸಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಆಕಾಂಕ್ಷಿಗಳು ಒತ್ತಡ ಹಾಕಿದ್ದಾರೆ.  ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಸಚಿವ ಸಂಪುಟ ರಚನೆ ಅಥವಾ ಪುನಾರಚನೆ ಕುರಿತಂತೆ ಮಾತುಕತೆ ನಡೆಸಲೇಬೇಕೆಂದು ಆಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ.

ಪುನಾರಚನೆಯೋ ಅ ಥವಾ ವಿಸ್ತರಣೆಯೋ ನಮಗೆ ಗೊತ್ತಿಲ್ಲ. ಕಾರ್ಯಕಾರಿಣಿ ಸಭೆಯಲ್ಲಿ ನೀವು ಚರ್ಚೆ ಮಾಡಲೇಬೇಕು. ಇಲ್ಲಿಯ ತನಕ ಕುಂಟು ನೆಪಗಳನ್ನು ಹೇಳಿ ಮುಂದೂಡಿದ್ದು ಸಾಕು ಎಂದು ಆಕಾಂಕ್ಷಿಗಳು ಕಿಡಿದ್ದಾರೆ.  ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಮುನಿರತ್ನ, ಎಚ್.ವಿಶ್ವನಾಥ್, ಉಮೇಶ್ ಕತ್ತಿ, ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರ ಆಕಾಂಕ್ಷಿಗಳು ಸಿಎಂ ಮೇಲೆ ಒತ್ತಡದ ತಂತ್ರ ಅನುಸರಿಸಿದ್ದಾರೆ.

ನೀವು ಮಾತ್ರ ಅಧಿಕಾರ ಅನುಭವಿಸಬೇಕು. ನಾವು ಮಾತ್ರ ಇನ್ನು ಹೀಗೆ ಎಷ್ಟು ದಿನ ವನವಾಸ ಅನುಭವಿಸಬೇಕು, ನಮಗೂ ಸಚಿವರಾಗಬೇಕೆಂಬ ಆಸೆ ಇದೆ. ನೀವು ವಿಸ್ತರಣೆ ಮಾಡುತ್ತೀರೋ ಅಥವಾ ಪುನಾರಚನೆ ಮಾಡುತ್ತೀರೋ ನಮಗೆ ಗೊತ್ತಿಲ್ಲ. ಒಟ್ಟಿನಲ್ಲಿ ಯಾವುದಾದರೊಂದು ತೀರ್ಮಾನ ಮಾಡಲೇಬೇಕೆಂದು ಒತ್ತಡ ಹಾಕಿರುವುದು ಬೆಳಕಿಗೆ ಬಂದಿದೆ.
ಇನ್ನು ಎಷ್ಟು ದಿನ ಹೀಗೆ ವಿಸ್ತರಣೆಯನ್ನು ಅಥವಾ ಪುನಾರಚನೆಯನ್ನು ಮುಂದೂಡುತ್ತೀರಿ. ಗ್ರಾಪಂ ಚುನಾವಣೆ ಎಲ್ಲವೂ ಮುಗಿದಿದೆ.

ಇನ್ನು ಕೇವಲ ಅಧಿಕಾರಾವಧಿ 2 ವರ್ಷ ಮಾತ್ರ ಇದೆ. ನಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ವರ್ಷಗಳೇ ಕಳೆದಿವೆ. ಆದರೂ ನೀವು ಇಂದು ನಾಳೆ ಎನ್ನುತ್ತಲೇ ಇಲ್ಲದ ಕಾರಣಗಳನ್ನು ಕೊಡುತ್ತಿದ್ದೀರಿ. ನಮ್ಮ ತ್ಯಾಗಕ್ಕೆ ಬೆಲೆಯೇ ಇಲ್ಲವೇ ಎಂದು ಸಿಎಂ ಬಳಿ ಅಸಮಾಧಾನ ಹೊರಹಾಕಿದ್ದಾರೆ.  ರಾಜ್ಯದಲ್ಲಿ ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದಿದೆ. ಕಡೆಪಕ್ಷ ಸಂಕ್ರಾಂತಿ ಬಳಿಕವಾದರೂ ವಿಸ್ತರಣೆಗೆ ಸಮಯ ಅವಕಾಶವನ್ನು ನಿಗದಿಪಡಿಸಿ. ಕಾರ್ಯಕರ್ತರಲ್ಲಿ ನಮಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಇನ್ನು ಎಷ್ಟು ದಿನ ಮುಂದೂಡುತ್ತೀರಿ? ಯಾವುದಾದರೊಂದು ಸ್ಪಷ್ಟ ನಿಲವು ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದಿದೆ.

ಮೂಲಗಳ ಪ್ರಕಾರ ಕಾರ್ಯಕಾರಿಣಿ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಮುಖಂಡರು ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮಪಂಚಾಯ್ತಿ ಚುನಾವಣೆ ಮುಗಿದಿರುವುದರಿಂದ ಇನ್ನಷ್ಟು ವಿಳಂಬ ನೀತಿ ಅನುಸರಿಸದೆ ಆದಷ್ಟು ಶೀಘ್ರ ಯಾವುದಾದರೊಂದು ತೀರ್ಮಾನಕ್ಕೆ ಬರುವ ಸಾಧ್ಯತೆಇದೆ.

ಸಂಜೆ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಪಕ್ಷದಲ್ಲಿ ಪದೇ ಪದೇ ನಾಯಕತ್ವದ ವಿರುದ್ಧ ಅಪಸ್ವರ ಎತ್ತುತ್ತಿರುವುದರ ಬಗ್ಗೆಯೂ ಚರ್ಚೆ ನಡೆಯಲಿದ್ದು, ಭಿನ್ನಮತಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಇಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ನಾಳೆ ಕಾರ್ಯಕಾರಿಣಿ ಸಭೆ ನಡೆಯಲಿದೆ.

Facebook Comments