ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಬಿಜೆಪಿ ವರಿಷ್ಠರ ಚಿಂತನೆ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.17- ಪ್ರಸ್ತುತ ನಡೆಯುತ್ತಿರುವ ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಅದ್ಧೂರಿ ಜಯ ತಂದರೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಕಮಲ ಪಾಳೆಯದ ವರಿಷ್ಠರು ನಿರ್ಧರಿಸಿದ್ದಾರೆ.

ಕುತೂಹಲಕಾರಿ ವಿಷಯವೆಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಷಯದಲ್ಲಿ ನಿರ್ಲಕ್ಷ್ಯದ ಧೋರಣೆ ತೋರುತ್ತಿದ್ದರೂ ಅವರ ನಾಯಕತ್ವದಲ್ಲಿಯೇ ಮಧ್ಯಂತರ ಚುನಾವಣೆಗೆ ಹೋಗಲು ತೀರ್ಮಾನಿಸಲಾಗಿದೆ. ಸಧ್ಯ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿದರೆ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಬಹುತೇಕ ಖಚಿತ ಎಂದು ದೆಹಲಿಯ ಉನ್ನತ ಮೂಲಗಳು ತಿಳಿಸಿವೆ.

ಇದೇ ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಾಗಬೇಕಿದೆ. ಆದರೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಪ್ರಬಲ ಲಿಂಗಾಯತ ಸಮುದಾಯ ತಿರುಗೇಟು ನೀಡಬಹುದು ಎಂಬ ಆತಂಕವಿದೆ.ಹೀಗಾಗಿಯೇ ಈ ಸಮಸ್ಯೆಯನ್ನು ಎಚ್ಚರಿಕೆಯಿಂದ ನಿವಾರಿಸಲು ಬಿಜೆಪಿ ವರಿಷ್ಠರು ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಮಧ್ಯಂತರ ಚುನಾವಣೆಗಿಳಿದು ಗೆದ್ದು ಅಧಿಕಾರ ಹಿಡಿದ ನಂತರ ನಾಯಕತ್ವ ಬದಲಾವಣೆಗೆ ನಿರ್ಧರಿಸಿದ್ದಾರೆ.

ಚುನಾವಣೆಯ ನಂತರ ಯಡಿಯೂರಪ್ಪನವರಿಗೆ ವಯಸ್ಸಿನ ಕಾರಣ ನೀಡಿ ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಬೇಕು ಎಂಬುದು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಬ್ಲೂ ಪ್ರಿಂಟ್ ತಯಾರಿ ಆಗಿದೆ. ಇದೇ ಕಾರಣಕ್ಕಾಗಿ ಸದ್ದಿಲ್ಲದೆ ತಯಾರಿ ನಡೆಸುತ್ತಿರುವ ಬಿಜೆಪಿ ವರಿಷ್ಠರು ಈಗಾಗಲೇ ಪಕ್ಷ ಅಧಿಕಾರಕ್ಕೆ ಬರಲು ಪೂರಕ ತಯಾರಿ ಮಾಡಿಕೊಳ್ಳಿ ಎಂದು ಸಂಘಟನೆಗಳ ಪ್ರಮುಖರಿಗೆ ಸಿಗ್ನಲ್ ನೀಡಿದ್ದಾರೆ.

ಈ ವಿಷಯ ಬಿಜೆಪಿ ಪಾಳೆಯದಲ್ಲೇ ಕುತೂಹಲಕ್ಕೆ ಕಾರಣವಾಗಿದ್ದು ಸಧ್ಯ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಚುನಾವಣೆಯ ನಂತರ ಕರ್ನಾಟಕ ಮತ್ತೊಂದು ಮಧ್ಯಂತರ ಚುನಾವಣೆ ಎದುರಿಸುತ್ತದೆಯೇ ಎದುರಿಸಿದರೆ ಏನಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ.

Facebook Comments

Sri Raghav

Admin