ಮತ್ತೆ ಬಹಿರಂಗವಾಯ್ತು ಸಚಿವರಾದ ಆರ್.ಅಶೋಕ್-ಸುಧಾಕರ್ ನಡುವಿನ ಮುಸುಕಿನ ಗುದ್ದಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.30-ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಮುಸುಕಿನ ಸಮರ ನಡೆಯುತ್ತಿದ್ದ ಕಂದಾಯ ಸಚಿವ ಆರ್.ಅಶೋಕ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಇಂದು ಸ್ಫೋಟಗೊಂಡಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಹಾಸಿಗೆ ಹಾಗೂ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಖಾಸಗಿ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಿಗದಿಯಾಗಿತ್ತು.

ಈ ಸಭೆಗೆ ಕೊರೊನಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಈವರೆಗೂ ಕ್ವಾರಂಟೈನ್‍ಗೆ ಒಳಗಾಗಿದ್ದವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಭೆಗೆ ಆಗಮಿಸಿದ್ದರು.

ಸಭೆ ಮುಗಿದ ಬಳಿಕ ಅಶೋಕ್ ಮತ್ತು ಕೆ.ಸುಧಾಕರ್ ಪ್ರತ್ಯೇಕವಾಗಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುವ ಮೂಲಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಈ ಬಗ್ಗೆ ಮೊದಲು ಮಾತನಾಡಿದ ಸುಧಾಕರ್, ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ಕೋವಿಡ್ ಉಸ್ತುವಾರಿಯನ್ನು ನನಗೇ ನೀಡಿದ್ದಾರೆ. ಕಂದಾಯ ಸಚಿವರು ಹಿರಿಯರು. ಅವರು ಸಾಕಷ್ಟು ಅನುಭವಿಗಳು.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎನ್ನುತ್ತಲೇ ಅಶೋಕ್‍ಗೆ ಟಾಂಗ್ ನೀಡಿದರು.  ಬೆಂಗಳೂರು ಕೋವಿಡ್ ಉಸ್ತುವಾರಿಯನ್ನು ಸ್ವಲ್ಪ ನೋಡಿಕೊಳ್ಳುವಂತೆ ಕಂದಾಯ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

ನನಗೆ ವೈದ್ಯಕೀಯ ಖಾತೆ ನೀಡಿರುವುದರಿಂದ ಬೆಂಗಳೂರು ಉಸ್ತುವಾರಿ ನನಗೆ ಬರುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಎಲ್ಲರೂ ಸಾಮೂಹಿಕವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.  ಆದರೆ ತಮ್ಮ ಮಾತಿನಲ್ಲಿ ಎಂದಿಗೂ ಸುಧಾಕರ್ ಎಲ್ಲಿಯೂ ಅಶೋಕ್ ಅವರನ್ನು ಉಸ್ತುವಾರಿ ಎಂದು ಹೇಳಲಿಲ್ಲ.

ಇನ್ನು ಸುಧಾಕರ್ ಅವರ ಪ್ರತಿಕ್ರಿಯೆಗೆ ಆರ್.ಅಶೋಕ್ ಏನನ್ನೂ ಮಾತನಾಡದೆ ನುಣುಚಿಕೊಂಡರು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಕೈ ಮುಗಿದು ಊಟ ಆಯಿತೇ ಎಂದು ನಿರ್ಗಮಿಸಿದರು.

Facebook Comments