ರಾಜೀನಾಮೆ ಬೆದರಿಕೆ ಹಾಕಿದ ಮತ್ತೊಬ್ಬ ಬಿಜೆಪಿ ಶಾಸಕ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ನನ್ನ ಕ್ಷೇತ್ರವಾದ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಅಗತ್ಯವಾದ ಅನುದಾನ ಕೊಡದೇ ಇದ್ದರೆ ನಾನು ನನ್ನ ಮುಂದಿನ ತೀರ್ಮಾನ ಮಾಡಲೇಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮಾಡಿಕೊಂಡ ಮನವಿಗೆ ಈವರೆಗೂ ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಒಂದು ವೇಳೆ ಈ ಬಾರಿಯೂ ಅನುದಾನ ಸಿಗದಿದ್ದರೆ ನಾನು ಬೇರೆಯದೇ ಯೋಚನೆ ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ವೇಳೆ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಅವರ ಮಾತಿನ ಮೇಲೆ ನನಗೆ ಅಪಾರವಾದ ಗೌರವವಿದೆ. ನಾನೊಬ್ಬ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದು ನೋವು ತೋಡಿಕೊಂಡರು.ನನ್ನ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅನುದಾನ ಬಿಡುಗಡೆ ಮಾಡದಿದ್ದರೆ ನಾನು ಜನರಿಗೆ ಹೇಗೆ ಮುಖ ತೋರಿಸಲಿ? ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ನನ್ನ ಕರೆಸಿ ಮಾತನಾಡಿದ್ದಾರೆ. ನಾನು ಅಧಿಕಾರಕ್ಕೆ ಬಂದು ಸ್ವಲ್ಪ ದಿನವಾಗಿದೆ. ಎಲ್ಲ ಸಮಸ್ಯೆಗಳಿಗೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಅವರನ್ನು ಭೇಟಿ ಮಾಡಿ ನನ್ನ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತೇನೆ. ಮುಖ್ಯಮಂತ್ರಿ ಅವರಿಂದ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ನನ್ನ ಕ್ಷೇತ್ರದಲ್ಲಿ ಕಳೆದ ಬಾರಿಯೂ ಪ್ರವಾಹ ಬಂದಿತ್ತು. ಆರು ಜನ ಕೊಚ್ಚಿಕೊಂಡು ಹೋಗಿದ್ದರು. ನೂರಾರು ಮನೆಗಳು ಹಾನಿಯಾಗಿವೆ. ಕ್ಷೇತ್ರದಲ್ಲಿ ಜನರು ನನ್ನ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದರು. ಅವರಿಬ್ಬರು ಬಂದ ಮೇಲೆಯೂ ಅನುದಾನ ಸಿಕ್ಕಿಲ್ಲವೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ನನ್ನ ಕ್ಷೇತ್ರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರವಾಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಬಂದು ಹೋದರೆ ಎಂ.ಪಿ.ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎಂದು ನನ್ನ ವಿರುದ್ದ ಅಪಪ್ರಚಾರ ನಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀವು ಕಾಂಗ್ರೆಸ್ ಸೇರುವ ಯೋಜನೆಯನ್ನು ಹಾಕಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯನವರ ಹುಟ್ಟುಹಬ್ಬವಿತ್ತು. ಪ್ರತಿವರ್ಷ ಶುಭಕೋರುತ್ತೇನೆ. ಸಿದ್ದರಾಮಯ್ಯ ಎಂದರೆ ನನಗೆ ಬಹಳ ಪ್ರೀತಿ. ಅಹಿಂದ ನಾಯಕ ಎಂದರೆ ಅವರೊಬ್ಬರು ಮಾತ್ರ. ಅವರಿಗೆ ಶುಭಾಶಯ ಕೋರಲು ಹೋಗಿದ್ದೆ ಎಂದು ಸಮರ್ಥಿಸಿಕೊಂಡರು.

ಸಿ.ಟಿ.ರವಿ ಹಾಗೂ ನನ್ನ ನಡುವೆ ಮೊದಲಿನಿಂದಲೂ ರಾಜಕೀಯವಾಗಿ ಭಿನ್ನಭಿಪ್ರಾಯವಿದೆ. ನಮ್ಮಬ್ಬರ ನಡುವೆ ಸಂಬಂಧ ಅಷ್ಟಕಷ್ಟೆ. ರಾಜಕೀಯಕ್ಕೆ ಬಂದಾಗಿನಿಂದಲೂ ನಮ್ಮಿಬ್ಬರ ನಡುವೆ ಸಂಬಂಧ ಸುಧಾರಿಸಿಲ್ಲ. ಆದರೆ ನಾನು ಕ್ಷೇತ್ರದ ಜನತೆಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

Facebook Comments