ನಡಹಳ್ಳಿ ಸುದ್ದಿಗೋಷ್ಠಿಯಲ್ಲಿ ಹೈಡ್ರಾಮಾ, ಎಂ.ಬಿ.ಪಾಟೀಲ್ ಬೆಂಬಲಿಗರ ದಾಂಧಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಏ.13- ಬಿಜೆಪಿ ಶಾಸಕ ಎಸ್.ಎಸ್.ಪಾಟೀಲ್ ನಡಹಳ್ಳಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿದ ಗೃಹ ಸಚಿವ ಎಂ.ಬಿ.ಪಾಟೀಲ್ ಬೆಂಬಲಿಗರು ಘೇರಾವ್ ಹಾಕಿ ಮಾತಿನ ಚಕಮಕಿ ನಡೆಸಿದ್ದಾರೆ.

ವಿಜಯಪುರ ನಗರದ ಮಧುವನ ಹೊಟೇಲ್‍ನಲ್ಲಿ ಶಾಸಕ ನಡಹಳ್ಳಿಯವರು ನೀರಾವರಿ ವಿಷಯ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಏಕಾಏಕಿ ಹೊಟೇಲ್‍ಗೆ ನುಗ್ಗಿದ ಎಂ.ಬಿ.ಪಾಟೀಲ್ ಬೆಂಬಲಿಗರು ನಡಹಳ್ಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಗಮಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಮತ್ತು ಸಿಬ್ಬಂದಿ ಭೈೀಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಎಸ್.ಎಸ್.ಪಾಟೀಲ್ ನಡಹಳ್ಳಿಯವರು ನೀರಾವರಿ ಕಾಮಗಾರಿಗಳ ಸಂಬಂಧ ಈ ಹಿಂದ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಹಾಗೂ ಹಾಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು.

ಮುದ್ದೆಬಿಹಾಳ ತಾಲೂಕಿನ ಬಹುತೇಕ ಕಾಮಗಾರಿಗಳು ಕಳಪೆಯಾಗಿದ್ದು, ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ 742 ಕೋಟಿ ರೂ. ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಧರ್ಮ ಒಡೆದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ನಡಹಳ್ಳಿಯವರು ಎಂ.ಬಿ.ಪಾಟೀಲ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಇಂದು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಹಲವರು ನುಗ್ಗಿ ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

Facebook Comments