ಕೊರೊನಾ ಕಫ್ರ್ಯೂಗೆ ಆಡಳಿತಾರೂಢ ಬಿಜೆಪಿ ಶಾಸಕರಿರಿಂದಲೇ ವಿರೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.10- ಕೊರೊನಾ ಕಟ್ಟಿಹಾಕಲು ಇಂದಿನಿಂದ ರಾಜ್ಯದ 8 ಜಿಲ್ಲೆಗಳಲ್ಲಿ ಕೊರೊನಾ ಕಫ್ರ್ಯೂ ಜಾರಿ ಮಾಡಲು ಮುಂದಾಗಿರುವ ರಾಜ್ಯದ ಸರ್ಕಾರದ ತೀರ್ಮಾನಕ್ಕೆ ಆಡಳಿತಾರೂಢ ಬಿಜೆಪಿ ಶಾಸಕರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹತ್ತು ದಿನಗಳ ಕಫ್ರ್ಯೂಗೆ ಕರಾವಳಿ ಭಾಗದ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಉಡುಪಿ ಶಾಸಕ ರಘಪತಿ ಭಟ್‍ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸರ್ಕಾರ ಕೊರೊನಾ ಕಫ್ರ್ಯೂ ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನಲ್ಲಿ ರಾತ್ರಿ ವೇಳೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಸಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಕಳೆದ ವರ್ಷವೂ ಲಾಕ್‍ಡೌನ್ ಕಾರಣದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಲಿಲ್ಲ.

ಈ ವರ್ಷವೂ ಅದೇ ಕಾರಣಕ್ಕೆ ನಿಂತು ಹೋದರೆ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕರಾವಳಿಯಲ್ಲಿ ಈಗಾಗಲೇ ನಿಗದಿಯಾಗಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರ ಅವಕಾಶ ಕಲ್ಪಿಸಬೇಕಾಗಿ ವಿನಂತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಉಡುಪಿ, ಮಣಿಪಾಲ ನಗರದಲ್ಲಿ ನೈಟ್ ಕಫ್ರ್ಯೂ ಬೇಡ ಎಂದು ಉಡುಪಿ ಶಾಸಕ ರಘುಪತಿ ಭಟ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಮನವಿ ಮಾಡಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೈವದ ಕೋಲ, ನಾಗಾರಾಧನೆ, ಯಕ್ಷಗಾನ ನಡೆಯಲಿದೆ. ಕಳೆದ ವರ್ಷ ಕೋವಿಡ್ ಲಾಕ್‍ಡೌನ್‍ನಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದಿರಲಿಲ್ಲ. ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಕಫ್ರ್ಯೂ ಜಾರಿಯಾದರೆ ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ ಎಂದಿದ್ದಾರೆ.

ಎಂಐಟಿ ಹೊರತುಪಡಿಸಿದರೆ ಉಡುಪಿ ಹಾಗೂ ಮಣಿಪಾಲದಲ್ಲಿ ಯಾವುದೇ ಆತಂಕ ಇಲ್ಲ. ಎಂಐಟಿಯಲ್ಲಿ ಕಂಟೋನ್ಮೆಂಟ್ ಜೋನ್ ಮಾಡಿ ಪಾಸಿಟಿವ್ ರೇಟ್ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಕೇವಲ 400 ಮಾತ್ರ ಸಕ್ರಿಯ ಪ್ರಕರಣಗಳಿವೆ. ಕೇವಲ 59 ಮಂದಿ ಆಸ್ಪತ್ರೆಯಲ್ಲಿದ್ದು, ಯಾರ ಸ್ಥಿತಿಯೂ ಗಂಭೀರವೇನಿಲ್ಲ ಎಂದು ಹೇಳಿದ್ದಾರೆ.

ಸಾವು ಪ್ರಕರಣಗಳು ಕಡಿಮೆ ಇವೆ. ಸರಾಸರಿ ಎರಡೂವರೆ ಸಾವಿರ ಟೆಸ್ಟ್ ಮಾಡುತ್ತಿದ್ದೇವೆ ಕೇವಲ 50 ರಿಂದ 60 ಪಾಸಿಟಿವ್ ಬರುತ್ತಿದೆ. ಹೀಗಾಗಿ ಕಫ್ರ್ಯೂ ಜಾರಿ ಮಾಡದೆ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಿ ಎಂದು ಭಟ್ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಇನ್ನು ಸರ್ಕಾರದ ನಿಯಮಗಳಿಗೆ ಹಿಂದೂ ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಬೇಕು. ನಿಯಮದ ಹೆಸರಿನಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ಗದಾಪ್ರಹಾರ ಬೇಡ. ಸರ್ಕಾರ ಈ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕು.

Facebook Comments