ಬಾಯಿ ಬಿಗಿಹಿಡಿದು ಮಾತಾಡುವಂತೆ ಬಿಜೆಪಿ ಸಚಿವರು -ಶಾಸಕರಿಗೆ ಸಿಎಂ ಕಟ್ಟಪ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸಚಿವರಾಗಲಿ ಇಲ್ಲವೆ ಶಾಸಕರು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆಗಳನ್ನು ನೀಡಬಾರದೆಂದು ಬಿಜೆಪಿ ಕಟ್ಟಪ್ಪಣೆ ವಿಧಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು, ಕೆಲವು ಸಚಿವರು ಮತ್ತು ಶಾಸಕರಿಗೆ ಸೂಚನೆ ಕೊಟ್ಟಿದ್ದು, ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಿದರೆ, ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಸಂಬಂಧಪಟ್ಟವರು ಹೊರತುಪಡಿಸಿ ಕಾಯ್ದೆ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ತರಬಾರದು. ಅದರಲ್ಲೂ ಒಂದು ಧರ್ಮ ಇಲ್ಲವೆ, ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆಗಳನ್ನು ನೀಡಿದರೆ ಸಹಿಸುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲೇ ಎಚ್ಚರಿಸಲಾಗಿದೆ.

ಬಳ್ಳಾರಿನಗರ ಶಾಸಕ ಸೋಮಶೇಖರರೆಡ್ಡಿ ಸಿಎಎ ಕಾಯ್ದೆ ಪರ ನಡೆದ ಅಭಿಯಾನದ ವೇಳೆ ನೀಡಿರುವ ಹೇಳಿಕೆಗಳು ಪಕ್ಷ ಹಾಗೂ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಸಿರುವುದರಿಂದ ಮುಂದೆ ಆಗಬಹುದಾದ ಹಾನಿಯನ್ನು ತಡೆಯಲು ಸಿಎಂ ಯಡಿಯೂರಪ್ಪ ಮತ್ತು ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಗೋಲಿಬಾರ್‍ಗೆ ಇಬ್ಬರು ಯುವಕರು ಮೃತಪಟ್ಟು ಸರ್ಕಾರಕ್ಕೆ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಪ್ರತಿಪಕ್ಷಗಳು ಕಾಯ್ದೆ ವಿರುದ್ಧವಾಗಿ ಒಂದು ಸಮುದಾಯದವರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಇಂತಹ ವೇಳೆ ನಾವು ಸಾಕಷ್ಟು ಜಾಗೃತರಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಈ ರೀತಿ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಮುಂದೆ ಸಚಿವರು ಹಾಗೂ ಪಕ್ಷದ ವಕ್ತಾರರನ್ನು ಹೊರತುಪಡಿಸಿ ಕಾಯ್ದೆ ಬಗ್ಗೆ ಯಾರೊಬ್ಬರೂ ಪರ ವಿರೋಧ ಹೇಳಿಕೆಗಳನ್ನು ನೀಡಬಾರದು. ಕಾಯ್ದೆ ಜಾರಿಯಾಗುವುದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಎಂಬುದನ್ನಷ್ಟೇ ಮನವರಿಕೆ ಮಾಡಿಕೊಡಿ. ಅದರಲ್ಲೂ ಒಂದು ಸಮುದಾಯವನ್ನು ಎತ್ತಿಕಟ್ಟಿ ಮತ್ತೊಂದು ಸಮುದಾಯವನ್ನು ಟೀಕೆ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಬಿಎಸ್‍ವೈ ಹೇಳಿದ್ದಾರೆ ಎನ್ನಲಾಗಿದೆ.

ರೆಡ್ಡಿಗೆ ತರಾಟೆ: ಇನ್ನು ಕಾಯ್ದೆ ಕುರಿತಂತೆ ಮುಸ್ಲಿಂ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕ ಸೋಮಶೇಖರರೆಡ್ಡಿಗೆ ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ದೂರವಾಣಿ ಮೂಲಕ ರೆಡ್ಡಿ ಜೊತೆ ಮಾತನಾಡಿರುವ ಬಿಎಸ್‍ವೈ ಆವೇಶದಲ್ಲಿ ಈ ರೀತಿ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ನಾಲ್ಕು ಜನ ಸೇರಿದಾಗ ಹೇಗೆ ಮಾತನಾಡಬೇಕೆಂಬ ಪರಿಜ್ಞಾನವಿರಬೇಕು.

ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಾರೆ ಎಂದು ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡಬೇಡಿ. ನಿಮ್ಮ ತಪ್ಪು ನಡವಳಿಕೆಯಿಂದ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುತ್ತದೆ. ಇದನ್ನು ಹೇಗೆ ಸರಿಪಡಿಸಬೇಕೆಂದು ಪ್ರಶ್ನೆ ಮಾಡಿದ್ದಾರೆ.  ಕಾಯ್ದೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲರೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನೀವು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ರೀತಿ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ.

ಅದರಲ್ಲೂ ನೀವು ಎಂದೂ ವಿವಾದ ಮಾಡಿಕೊಂಡವರಲ್ಲ. ಬಳ್ಳಾರಿಯಲ್ಲಿ ಮುಸ್ಲಿಮರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ. ನಿಮ್ಮ ಸಹೋದರ ಜನಾರ್ಧನರೆಡ್ಡಿ ಆಪ್ತ, ಬಲಗೈ ಭಂಟ ಆಲಿಖಾನ್ ನಿಮ್ಮ ವಿರುದ್ಧ ಬಂದು ಪ್ರತಿಭಟನೆ ನಡೆಸುತ್ತಾರೆ. ಇದನ್ನು ಅಸ್ತ್ರವಾಗಿಟ್ಟುಕೊಂಡು ಪ್ರತಿಪಕ್ಷಗಳು ಕಾಯ್ದೆ ಜಾರಿಯಾದರೆ ಮುಸ್ಲಿಮರಿಗೆ ಪೌರತ್ವ ಸಿಗುವುದಿಲ್ಲ. ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂಬ ವದಂತಿ ಹಬ್ಬಿಸುತ್ತಾರೆ. ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳಿ ಎಂದು ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.

ಸದಾ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಬಿಎಸ್‍ವೈ ಹಾಗೂ ಕಟೀಲ್ ದೂರವಾಣಿ ಮೂಲಕ ಕಾಯ್ದೆ ಬಗ್ಗೆ ತುಟಿ ಬಿಚ್ಚದಂತೆ ಸೂಚನೆ ಕೊಟ್ಟಿದ್ದಾರೆ. ನಾವು ಪೌರತ್ವ ಕಾಯ್ದೆ ಕುರಿತಂತೆ ಅಭಿಯಾನ ಹಮ್ಮಿಕೊಂಡಿದ್ದೇವೆ. ಕಾಯ್ದೆ ಜಾರಿಯಾಗುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಪಕ್ಷದ ಪ್ರಮುಖರು ಮನವರಿಕೆ ಮಾಡಿಕೊಡಬೇಕು. ಉಳಿದಂತೆ ಅಸಂಬದ್ಧ ಹೇಳಿಕೆಗಳನ್ನು ನೀಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Facebook Comments