ಬಿಜೆಪಿಯಲ್ಲಿ ಸೃಷ್ಟಿಯಾಯ್ತು ಅತೃಪ್ತರ ಗ್ಯಾಂಗ್..! ಸಮಾನ ಮನಸ್ಕರ ಮೀಟಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಚುನಾವಣೆಯಲ್ಲಿ ಪರಾಭವಗೊಂಡವರು ಹಾಗೂ ವಲಸಿಗರಿಗೆ ಮಣೆ ಹಾಕುತ್ತಿರುವುದನ್ನು ವಿರೋಧಿಸಿ ಸಮಾನ ಮನಸ್ಕರು ಇಂದು ಕೂಡ ಸಭೆ ನಡೆಸಿದ್ದಾರೆ. ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿ ಕೆಲ ಶಾಸಕರು ಶಾಸಕರ ಭವನದಲ್ಲಿ ಇಂದು ಕೂಡ ಸಭೆ ನಡೆಸಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ನಿನ್ನೆ 10 ಶಾಸಕರು ಸಭೆ ನಡೆಸಿದ್ದರು. ಇಂದು ಇದಕ್ಕೆ ಇನ್ನೂ ಕೆಲವು ಶಾಸಕರು ಸೇರ್ಪಡೆಯಾಗಿ ಸೋತವರಿಗೆ ಮಣೆ ಹಾಕುವುದಾದರೆ ಗೆದ್ದವರು ಪಕ್ಷಕ್ಕೆ ಬೇಡವೇ ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜುಗೌಡ ನಾಯಕ್, ದತ್ತಾತ್ರೇಯ ಪಾಟೀಲ್ ರೇವೂರ, ಬಸವನಗೌಡ ಮತ್ತಿಮೋಡ್, ಶಿವರಾಜ್ ಪಾಟೀಲ್, ಪರಣ್ಣ ಮನವಳ್ಳಿ, ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ವಿಶ್ವನಾಥ್ ಮಾಮನಿ ಸೇರಿದಂತೆ ಅನೇಕರು ವರಿಷ್ಠರ ತೀರ್ಮಾನಕ್ಕೆ ತಿರುಗಿ ಬಿದ್ದಿದ್ದಾರೆ.

ಇದರ ಜತೆಗೆ ಇನ್ನೂ ಕೆಲವು ಶಾಸಕರು ಕೈ ಜೋಡಿಸಲು ಮುಂದಾಗಿದ್ದು, ಎಸ್.ಎ.ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಕರುಣಾಕರರೆಡ್ಡಿ, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಚಂದ್ರಪ್ಪ ಸೇರಿದಂತೆ ಇನ್ನೂ ಕೆಲವು ಅಸಮಾಧಾನಿತ ಶಾಸಕರು ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಕರಾವಳಿ ಭಾಗದ ಶಾಸಕರಲ್ಲಿ ಅಸಮಾಧಾನ ಮಡುಗಟ್ಟಿದ್ದರೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಭೀತಿಯಿಂದ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ನಮ್ಮ ಭಾಗದವರೇ ಅಧ್ಯಕ್ಷರಾಗಿದ್ದು, ಜತೆಗೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ನಾಯಕಿ.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನರು ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದ್ದಾರೆ. ನಮ್ಮ ಭಾಗದಿಂದ ಒಬ್ಬರನ್ನೂ ಸಚಿವರನ್ನಾಗಿ ಮಾಡಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  ಇತ್ತ ಶಾಸಕರ ಭವನದಲ್ಲಿ ಸಭೆ ನಡೆಸಿರುವ ಬಹುತೇಕ ಶಾಸಕರು ಎಲ್ಲ ಭಾಗಕ್ಕೂ ಸೂಕ್ತ ನ್ಯಾಯ ಸಿಗುವಂತೆ ಸಂಪುಟ ವಿಸ್ತರಣೆ ಮಾಡಬೇಕು. ಸೋತವರನ್ನೇ ಸಚಿವರನ್ನಾಗಿ ಮಾಡುವುದಾದರೆ ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದವರನ್ನು ಮಂತ್ರಿ ಮಾಡಿ ಎಂದು ವ್ಯಂಗ್ಯವಾಡುತ್ತಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರು ಪಕ್ಷಕ್ಕೆ ನೀಡಿರುವ ಕೊಡುಗೆಯಾದರೂ ಏನು? ರಾಮನಗರ ಜಿಲ್ಲೆಯಲ್ಲಿ ಬಿಜೆಪಿಯನ್ನು ಎಷ್ಟರ ಮಟ್ಟಿಗೆ ಸಂಘಟಿಸಿದ್ದಾರೆ? ಅವರನ್ನು ನಂಬಿ ಎಷ್ಟು ಮಂದಿ ಶಾಸಕರು ಬಿಜೆಪಿಗೆ ಬಂದಿದ್ದಾರೆ? ಅವರಿಗೆ ಸಂಪುಟದಲ್ಲಿ ಏಕೆ ಮಣೆ ಹಾಕಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ ಅಥವಾ ಪಕ್ಷದ ತೀರ್ಮಾನಕ್ಕೂ ವಿರೋಧ ವ್ಯಕ್ತಪಡಿಸುತ್ತಿಲ್ಲ.

ಸೋತವರನ್ನೂ ಸಂಪುಟಕ್ಕೆ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಸಿ.ಪಿ.ಯೋಗೇಶ್ವರ್‍ಗೆ ಯಾವುದೇ ಕಾರಣಕ್ಕೂ ಮಂತ್ರಿಸ್ಥಾನ ನೀಡಲೇಬಾರದು. ವರಿಷ್ಠರು ಈ ಬಗ್ಗೆ ಗಮನ ಹರಿಸಬೇಕೆಂದು ಅನೇಕರು ಮನವಿ ಮಾಡಿದ್ದಾರೆ.  ಸಂಪುಟ ವಿಸ್ತರಣೆಗೆ ದಿನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಶಾಸಕರು ಬಿಟ್ಟು ಬಿಟ್ಟು ಸಭೆ ನಡೆಸುತ್ತಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿದೆ.

Facebook Comments