ವ್ಯಕ್ತಿಗಿಂತ ಪಕ್ಷ ಮೊದಲು, ಆಶಿಸ್ತು ಸಹಿಸುವುದಿಲ್ಲ: ಶಾಸಕರಿಗೆ ಷಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.17- ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಕೂಡಲೇ ಅಶಿಸ್ತು ಮತ್ತು ಸಾರ್ವಜನಿಕವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಖಚಿತ ಎಂದು ಭಿನ್ನಮತೀಯರಿಗೆ ಕೇಂದ್ರ ಸಚಿವ ಅಮಿತ್ ಷಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ತಿಪ್ಪಾರೆಡ್ಡಿ, ಅಭಯ್ ಪಾಟೀಲ, ಎಂ.ಪಿ.ರೇಣುಕಾಚಾರ್ಯ, ಅಪ್ಪಚ್ಚುರಂಜನ್, ಸತೀಶ್ ರೆಡ್ಡಿ, ಸುನೀಲ್ ಕುಮಾರ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರ ಶಾಸಕರು ಅಸಮಾಧಾನಗೊಂಡಿರುವ ಬೆನ್ನಲ್ಲೇ ಅಮಿತ್ ಷಾ ಅವರ ಈ ಸಂದೇಶ ಮಹತ್ವ ಪಡೆದುಕೊಂಡಿದೆ.

ವ್ಯಕ್ತಿಗಿಂತ ಪಕ್ಷ ಮೊದಲು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಶಿಸ್ತು ಸಹಿಸುವುದಿಲ್ಲ ಎನ್ನುವ ಮೂಲಕ ಸಚಿವ ಹುದ್ದೆ ವಂಚಿತ ಬಿಜೆಪಿ ನಾಯಕರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.  ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ರಾಜ್ಯ ನಾಯಕರ ಜತೆ ಅಮಿತ್ ಷಾ ಸುದೀರ್ಘವಾಗಿ ಚರ್ಚೆ ನಡೆಸಿದರು.

ಸಭೆಯಲ್ಲಿ ಅಮಿತ್ ಷಾ ಅವರು ಯಾವೊಬ್ಬ ನಾಯಕರ ಹೆಸರನ್ನು ಪ್ರಸ್ತಾಪ ಮಾಡದಿದ್ದರೂ ಕೂಡ, ಸಚಿವ ಹುದ್ದೆ ವಂಚಿತರು ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿರುವುದಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದಲ್ಲಿ ನಾಯಕರು ಅಶಿಸ್ತಿನ ಕೆಲಸ ಮಾಡುವುದನ್ನು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದರು.

ಯತ್ನಾಳ್ ಉಚ್ಛಾಟನೆಗೆ ಪಟ್ಟು: ಸಿಡಿ ವಿಚಾರ ಬಳಸಿಕೊಂಡು ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ಪಕ್ಷದಿಂದ ಉಚ್ಛಾಟಿಸಲು ಆಗ್ರಹ ಕೇಳಿಬಂದಿದೆ. ವಿವಾದಿತ ಹೇಳಿಕೆಗಳಿಂದ ಸಿಎಂ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡುತ್ತಿರುವ ಯತ್ನಾಳ್ ವಿರುದ್ಧ ಈ ಬಾರಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಬಿಎಸ್‍ವೈ ಆಗ್ರಹಿಸಿದ್ದಾರೆ.

ಮಂತ್ರಿಮಂಡಲ ವಿಸ್ತರಣೆಯ ಬೆನ್ನಿಗೆ ಯತ್ನಾಳ್ ಮಾಡಿರುವ ಸಿಡಿ ಆರೋಪ ಪರಾಕಾಷ್ಠೆ ತಲುಪಿದ್ದು, ಏನಾದರೂ ಸರಿ ಅವರಿಗೆ ತಕ್ಕ ಶಾಸ್ತಿ ಮಾಡಿಸಲೇಬೇಕು ಎಂದು ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಯತ್ನಾಳ್ ವಿರುದ್ಧ ಕ್ರಮಕ್ಕೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮನಸ್ಸು ಮಾಡದಿರುವ ಹಿನ್ನೆಲೆಯಲ್ಲಿ ನೇರವಾಗಿ ಅಮಿತ್ ಷಾ ಮುಂದೆಯೇ ಉಚ್ಛಾಟನೆಯ ಬೇಡಿಕೆ ಇಟ್ಟರು ಎಂದು ಗೊತ್ತಾಗಿದೆ.

ಮುಂಬರಲಿರುವ ಉಪ ಚುನಾವಣೆಗಳಿಗೆ ಸಜ್ಜಾಗುವ ಹಾಗು ಅಸಮಾಧಾನವನ್ನು ಶಮನಗೊಳಿಸಿ ಪಕ್ಷವನ್ನು ಸಜ್ಜುಗೊಳಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಎದುರಾಗಲಿರುವ ಬೆಳಗಾವಿ ಲೋಕಸಭೆ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಉಪ ಚುನಾವಣೆಗಳಲ್ಲಿ ಹಾಗೂಇತರ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಸಾಧನೆ ತೃಪ್ತಿದಾಯಕ. ಆದರೆ, ಅದು ಅತಿಯಾದ ಆತ್ಮವಿಶ್ವಾಸ ಆಗಬಾರದು. ಪಕ್ಷದಲ್ಲಿ ಆಂತರಿಕ ಅಸಮಾಧಾನಕ್ಕೆ ಅವಕಾಶ ನೀಡದೆ ಪಕ್ಷವನ್ನು ಸಜ್ಜುಗೊಳಿಸಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

ಸರ್ಕಾರ ಹಾಗು ಪಕ್ಷದ ನಡುವೆ ಸಮನ್ವಯತೆ ಇರಬೇಕು. ಭಿನ್ನಾಭಿಪ್ರಾಯವಿದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು, ಶಾಸಕರ ಅಹವಾಲು ಆಲಿಸಬೇಕು, ಕಾರ್ಯಕರ್ತರನ್ನೂ ಕಡೆಗಣಿಸಬಾರದು ಎಂದು ಹಲವು ಸಲಹೆಗಳನ್ನು ನೀಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇರುವ ಉತ್ತಮ ಇಮೇಜ್‍ಅನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ನಾಯಕರಿಗೆ ಅಮಿತ್ ಷಾ ಸೂಚನೆ ನೀಡಿದ್ದಾರೆ.

ಮುಂಬರುವ ಎಲ್ಲಾ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಭ್ಯರ್ಥಿ ಯಾರಾದರೂ ಗೆಲ್ಲಿಸಿಕೊಂಡು ಬರಬೇಕು. ಗ್ರಾಪಂ ಚುನಾವಣೆ ರೀತಿಯಲ್ಲೇ ಜಿಪಂ ಮತ್ತು ತಾಪಂ ಚುನಾವಣೆ ಗೆಲ್ಲಬೇಕು ಎಂದು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸದಾನಂದ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲï, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಸಚಿವರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಭಾಗವಹಿಸಿದ್ದರು.

Facebook Comments