ಸ್ಥಾನ ತ್ಯಾಗಕ್ಕೆ ಸಿದ್ಧರಾಗುವಂತೆ ಆಪ್ತ ಎಂಎಲ್‍ಸಿಗಳಿಗೆ ಯಡಿಯೂರಪ್ಪ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.19- ವಿಧಾನ ಪರಿಷತ್ ಸ್ಥಾನದ ತ್ಯಾಗಕ್ಕೆ ಸಿದ್ಧವಾಗಿ ಎಂದು ತಮ್ಮ ಆಪ್ತ ಎಂಎಲ್‍ಸಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹಾಗಾಗಿ ಅನರ್ಹ ಶಾಸಕರಿಗಾಗಿ ವಿಧಾನ ಪರಿಷತ್ ಸ್ಥಾನ ತೊರೆಯುವ ಅನಿವಾರ್ಯತೆಗೆ ಬಿಜೆಪಿ ಪರಿಷತ್ ಸದಸ್ಯರಿಗೆ ಎದುರಾಗಿದೆ.

ಹಾಲಿ ವಿಧಾನ ಪರಿಷತ್ ಸದಸ್ಯರಿಂದ ರಾಜೀನಾಮೆ ಕೊಡಿಸಬೇಕಾದ ಅನಿವಾರ್ಯತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಲುಕಿದ್ದಾರೆ. ಈಗಾಗಲೇ ರಾಣೆಬೆನ್ನೂರಿನ ಅನರ್ಹ ಶಾಸಕ ಆರ್.ಶಂಕರ್‍ಗೆ ಬಿಜೆಪಿ ಟಿಕೆಟ್ ಬದಲು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರನ್ನಾಗಿ ಮಾಡುವ ಭರವಸೆಯನ್ನು ಬಹಿರಂಗವಾಗಿಯೇ ಸಿಎಂ ಮಾಡಿದ್ದಾರೆ. ಇತ್ತ ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ಅಥಣಿ ಟಿಕೆಟ್ ನೀಡದೇ ಅವರನ್ನೂ ಎಂಎಲ್‍ಸಿ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಉಪಚುನಾವಣೆಯಲ್ಲಿ ಆಪರೇಷನ್ ಕಮಲದ ಪ್ರಮುಖರಾದ ರಮೇಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ವಾಗ್ದಾನ ನೀಡಿರುವ ಸಿಎಂ ಪ್ರಮುಖ ನಾಯಕರು ಸೋತರೂ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಆಪ್ತ ಮೂಲಗಳ ಪ್ರಕಾರ, ಸಿಎಂ ಆಪ್ತರೂ ಆಗಿರುವ, ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಚುನಾಯಿತರಾಗಿರುವ ರುದ್ರೇಗೌಡ, ರವಿಕುಮಾರ್, ಲೆಹರ್ ಸಿಂಗ್ ಮತ್ತು ತೇಜಸ್ವಿನಿ ರಮೇಶ್‍ಗೆ ಸಿಎಂ ಕರೆ ಮಾಡಿ ಅಗತ್ಯ ಬಿದ್ದರೆ ಪರಿಷತ್ ಸ್ಥಾನದ ತ್ಯಾಗಕ್ಕೆ ಸಿದ್ಧವಾಗಿರಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

Facebook Comments