ಕೇಂದ್ರ ಸಂಪುಟ ಸೇರಲು ರಾಜ್ಯ ಸಂಸದರ ಭಾರೀ ಲಾಬಿ, ರೇಸ್‌ನಲ್ಲಿರೋರು ಯಾರ‍್ಯಾರು ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 24-ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಲು ಬಿಜೆಪಿಯಲ್ಲಿ ಭಾರೀ ಲಾಬಿ ಆರಂಭವಾಗಿದೆ.

ಲೋಕಸಭಾ ಚುನಾವಣಾ ಇತಿಹಾಸದಲ್ಲೇ 25 ಸಂಸದರನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿರುವ ನಿದರ್ಶನ ಇರಲಿಲ್ಲ. ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕಮಲ ಅರಳಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಲು ತೆರೆಮರೆಯಲ್ಲಿ ಕಸರತ್ತು ಆರಂಭವಾಗಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 17 ಸಂಸದರು ಆಯ್ಕೆಯಾಗಿದ್ದರು. ಈ ವೇಳೆ ರಾಜ್ಯದಿಂದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಿ.ಎಂ.ಸಿದ್ದೇಶ್ವರ್‍ಗೆ ಮಂತ್ರಿ ಸ್ಥಾನ ನೀಡಲಾಗಿತ್ತು.

ಇದೀಗ ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಈ ಬಾರಿ 2ರಿಂದ ಮೂರು ಸಂಪುಟ ದರ್ಜೆ ಹಾಗೂ ಅಷ್ಟೇ ಸಂಖ್ಯೆಯ ಖಾತೆಗಳು ಸಿಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ವೀರಶೈವ, ಒಕ್ಕಲಿಗ, ಪರಿಶಿಷ್ಟ ಜಾತಿ/ವರ್ಗ ಸೇರಿದಂತೆ ಅನೇಕ ಸಮುದಾಯಗಳು ಬೆಂಬಲ ನೀಡಿರುವುದರಿಂದ ಎಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುವಂತೆ ರಾಜ್ಯ ನಾಯಕರು ಕೇಂದ್ರ ವರಿಷ್ಠರಿಗೆ ಬೇಡಿಕೆಯನ್ನು ಇಡಲಿದ್ದಾರೆ.

ಯಾರ್ಯಾರಿಗೆ ಅದೃಷ್ಟ:
ಹೊಸದಾಗಿ ಅಸ್ತಿತ್ವಕ್ಕೆ ಬರುವ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಈ ಬಾರಿ ಒಕ್ಕಲಿಗ ಕೋಟಾದಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಸಚಿವ ಡಿ.ವಿ.ಸದಾನಂದಗೌಡ ಸಂಪುಟ ದರ್ಜೆಯ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಅವರ ಹಿರಿತನವನ್ನು ಹಿಂದಿಕ್ಕಿ ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ.

ಒಂದು ವೇಳೆ ಯಡಿಯೂರಪ್ಪ ಪಟ್ಟು ಹಿಡಿದರೆ ಮಹಿಳಾ ಕೋಟಾದಲ್ಲಿ ಸಿಕ್ಕರೂ ಅಚ್ಚರಿ ಇಲ್ಲ.  ಈ ಚುನಾವಣೆಯಲ್ಲಿ ವೀರಶೈವ ಸಮುದಾಯ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿರುವ ಕಾರಣ ನರೇಂದ್ರ ಮೋದಿ ಸಂಪುಟದಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನವನ್ನು ನೀಡಲೇಬೇಕು.

ಈ ಹಿಂದೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ನೀಡಲಾಗಿತ್ತಾದರೂ ನಂತರ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು. ಈ ಬಾರಿ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಬೆಳಗಾವಿ ಹಾಗೂ ಬಾಗಲಕೋಟೆ ಕ್ಷೇತ್ರಗಳಿಂದ ಸತತ 4 ಬಾರಿ ಗೆದ್ದಿರುವ ಸುರೇಶ್ ಅಂಗಡಿ ಮತ್ತು ಗದ್ದಿಗೌಡರ್ ನಡುವೆ ಬಿರುಸಿನ ಸ್ಪರ್ಧೆ ಇದೆ.
ಇಬ್ಬರಲ್ಲಿ ಒಬ್ಬರಿಗೆ ಈ ಬಾರಿ ಅದೃಷ್ಟ ಒಲಿಯುವ ಲಕ್ಷಣಗಳು ಹೆಚ್ಚಾಗಿವೆ.

ಬ್ರಾಹ್ಮಣ ಸಮುದಾಯದಿಂದ ಈ ಬಾರಿ ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಧಾರವಾಡದಿಂದ ನಾಲ್ಕು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಷಿ ಕೇಂದ್ರ ಸಚಿವರಾಗುವ ಆಕಾಂಕ್ಷೆಯಲ್ಲಿದ್ದಾರೆ.

ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೆ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಅನಂತಕುಮಾರ್ ಹೆಗಡೆಗೆ ಸಚಿವ ಸ್ಥಾನ ಕೈ ತಪ್ಪಿದರೂ ಅಚ್ಚರಿ ಇಲ್ಲ. ಸಂಸತ್‍ನಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಪ್ರಹ್ಲಾದ್ ಜೋಷಿ ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷೆಗಳೇ ಹೆಚ್ಚಾಗಿದೆ.

ದಲಿತ ಸಮುದಾಯದಿಂದ ಚಾಮರಾಜನಗರದಲ್ಲಿ ಗೆದ್ದಿರುವ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ನಡುವೆಯೂ ಸ್ಪರ್ಧೆ ಏರ್ಪಟ್ಟಿದೆ. ಶ್ರೀನಿವಾಸ್ ಪ್ರಸಾದ್ ಹಾಗೂ ಜಿಗಜಿಣಗಿ ಇಬ್ಬರಿಗೂ ಕೇಂದ್ರದಲ್ಲಿ ಮಂತ್ರಿಯಾದ ಅನುಭವವಿದೆ. ಹಿರಿತನವನ್ನು ಪರಿಗಣಿಸಿದರೆ ಶ್ರೀನಿವಾಸ್ ಪ್ರಸಾದ್‍ಗೆ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ನೀಡಬೇಕಾಗುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದೇ ಜಿಗಜಿಣಗಿ ಅವರಿಗೂ ಕಳೆದ ಬಾರಿ ಸಚಿವರಾದ ಅನುಭವವೂ ಇದೆ.

ಜಾಧವ್‍ಗೆ ಜಾಕ್‍ಪಾಟ್?:
ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಿ ದಾಖಲೆ ಬರೆದಿರುವ ಡಾ.ಉಮೇಶ್ ಜಾಧವ್‍ಗೆ ಅದೃಷ್ಟ ಹೊಡೆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಪಕ್ಷದ ಮೂಲಗಳು.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗೆದ್ದರೆ ಕೇಂದ್ರದಲ್ಲಿ ನಿಮಗೆ ಮಂತ್ರಿ ಸ್ಥಾನ ನೀಡುವ ಸ್ಪಷ್ಟ ಭರವಸೆಯೊಂದಿಗೆ ಜಾಧವ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತೆಂದು ಹೇಳಲಾಗುತ್ತಿದೆ.

ಈಗ ಖರ್ಗೆ ವಿರುದ್ದ ಗೆದ್ದು ಉಪಚುನಾವಣೆಯಲ್ಲಿ ತಮ್ಮ ಮಗನನ್ನೂ ಗೆಲ್ಲಿಸಿಕೊಂಡಿರುವ ಜಾಧವ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಖುದ್ದು ನರೇಂದ್ರ ಮೋದಿ ಅವರೇ ವಿಶೇಷ ಕಾಳಜಿ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದ ಕೋಟಾದಲ್ಲಿ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆಯಾಗಿ ರಕ್ಷಣಾ ಸಚಿವರಾಗಿರುವುದರಿಂದ ಹೆಚ್ಚೆಂದರೆ ರಾಜ್ಯಕ್ಕೆ ಎರಡು ಸಂಪುಟ ದರ್ಜೆ, ಅಷ್ಟೇ ಸಂಖ್ಯೆಯ ರಾಜ್ಯ ಖಾತೆಗಳು ಸಿಗುವ ಸಂಭವವಿದೆ ಎಂದು ತಿಳಿದುಬಂದಿದೆ.

ಹಿಂದುಳಿದ ಸಮುದಾಯಕ್ಕೆ ಸಚಿವ ಸ್ಥಾನ ನೀಡುವುದಾದರೆ ಬೆಂಗಳೂರು ಕೇಂದ್ರದಿಂದ ಮೂರನೇ ಬಾರಿ ಗೆದ್ದಿರುವ ಪಿ.ಸಿ.ಮೋಹನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಹ್ಯಾಟ್ರಿಕ್ ಬಾರಿಸಿರುವ ನಳೀನ್‍ಕುಮಾರ್ ಕಟೀಲ್ ಸಚಿವರಾದರೂ ಅಚ್ಚರಿಪಡಬೇಕಿಲ್ಲ.

ಸಂಪುಟಕ್ಕೆ ರಾಜ್ಯದಿಂದ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಯಡಿಯೂರಪ್ಪನವರ ಜೊತೆ ಚರ್ಚೆ ನಡೆಸಿಯೇ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ.

ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯಿತ ಸಮುದಾಯ ಬಿಜೆಪಿಗೆ ಬೆನ್ನಿಗೆ ನಿಂತಿರುವುದರಿಂದ ಯಡಿಯೂರಪ್ಪನವರ ಮಾತಿಗೆ ಮನ್ನಣೆ ಸಿಗಲಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin