ಸಂಪುಟ ವಿಸ್ತರಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವ ಬೆನ್ನಲ್ಲೆ ಆಡಳಿತಾರೂಢ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.  ಅದಕ್ಕೆ ಕಾರಣವಾಗಿರುವುದು ಸಿಎಂ ಯಡಿಯೂರಪ್ಪನವರು ಸಂಪುಟದಲ್ಲಿ ಸಾಮಾಜಿಕ ನ್ಯಾಯ ಹಾಗೂ ಜಿಲ್ಲಾವಾರು ಪ್ರಾತಿನಿಧ್ಯ ಕೊಡದೇ ಇರುವುದು.  ಹೌದು ಯಡಿಯೂರಪ್ಪನವರ ಸಂಪುಟದಲ್ಲಿ 15ಕ್ಕೂ ಹೆಚ್ಚಿನ ಜಿಲ್ಲೆಗಳ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಂಪುಟ ವಿಸ್ತರಣೆಯಲ್ಲಿಯೂ ಈ ಎರಡೂ ಮಾನದಂಡಗಳನ್ನು ಯಡಿಯೂರಪ್ಪ ಪಾಲಿಸುವುದು ಅಸಾಧ್ಯ.

ಸಾಮಾಜಿಕ ನ್ಯಾಯ ಕೂಡ ಯಡಿಯೂರಪ್ಪ ಅವರ ಸಂಪುಟದಲ್ಲಿ ಕಾಣುತ್ತಿಲ್ಲ ಎಂಬ ಆರೋಪಗಳಿವೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಳಿಕ ಬಿಜೆಪಿಯಲ್ಲಿ ಮತ್ತೊಂದು ಹಂತದ ರಾಜಕೀಯ ವಿಪ್ಲವ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾವಾರು ಸಚಿವರನ್ನು ನೋಡದರೂ ಕೂಡ 15 ಜಿಲ್ಲೆಗಳ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಕೊಡಗು, ಚಾಮರಾಜನಗರ, ಉಡುಪಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರಿಗೆ ಮಂತ್ರಿಯಾಗುವ ಅದೃಷ್ಟ ಸಿಕ್ಕಿಲ್ಲ. ಹೀಗಾಗಿ ಈ ಜಿಲ್ಲೆಗಳ ಶಾಸಕರಲ್ಲಿ ಅಸಮಾಧಾನ ಒಳಗೊಳಗೆ ಸ್ಪೋಟವಾಗುತ್ತಿದೆ ಎಂಬ ಮಾಹಿತಿಯಿದೆ.

ಹೊರ ಜಿಲ್ಲೆಯ ಮಂತ್ರಿಗಳೇ ಸರಿಸುಮಾರು 15 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ಹವಣೆ ಮಾಡುತ್ತಿದ್ದಾರೆ. ಆದರೆ ಯಾರೂ ಕೂಡ ಸರಿಯಾಗಿ ಆ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳಿಗೆ. ಉದಾಹರಣೆಗೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಗೋವಿಂದ್ ಕಾರಜೋಳ ಅವರು ಅಲ್ಲಿಗೆ ಹೋಗದೆ ಹಲವು ತಿಂಗಳುಗಳಾಗಿವೆ ಎಂಬ ಆರೋಪಗಳಿವೆ.

ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಂತೂ ಅಂತಹ ಜಿಲ್ಲೆಗಳ ಜನರು ಒಂದು ರೀತಿಯಲ್ಲಿ ಅನಾಥರಾಗಿದ್ದರು ಎಂದರೂ ತಪ್ಪಿಲ್ಲ. ಬಹುತೇಕ ಸಚಿವರು ತಮಗೆ ಉಸ್ತುವಾರಿ ಕೊಟ್ಟಿರುವ ಜಿಲ್ಲೆಗಳಿಗೆ ಹೋಗುತ್ತಿಲ್ಲ ಎಂಬ ಆರೋಪಗಳಿವೆ. ಕೆಲವರು ಉಸ್ತುವಾರಿ ಜಿಲ್ಲೆಗಳಿಗೆ ಹೋದರೂ ಕೂಡ ವಾರ ಅಥವಾ ತಿಂಗಳ ಪ್ರವಾಸದಂತೆ ಭಾವಿಸಿದ್ದಾರೆ ಎಂಬ ಆರೋಪಗಳನ್ನು ಜಿಲ್ಲೆಯ ಸ್ವಪಕ್ಷದ ಶಾಸಕರೇ ಮಾಡುತ್ತಿದ್ದಾರೆ.

ಜಿಲ್ಲಾವಾರು ಮಂತ್ರಿಸ್ಥಾನ ಹಂಚಿಕೆ ಮಾಡಿರುವುದನ್ನು ಗನಿಸಿದರೆ ಕ್ರಮವಾಗಿ ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 7 ಸಚಿವರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 4, ಬೀದರ್ 1, ವಿಜಯನಗರ (ನೂತನ ಜಿಲ್ಲೆ)-1, ಬಾಗಲಕೋಟೆ 1, ಧಾರವಾಡ 1, ಗದಗ 1, ಉತ್ತರ ಕನ್ನಡ 1, ಹಾವೇರಿ 2, ಚಿತ್ರದುರ್ಗ 1, ತುಮಕೂರು 1, ಮಂಡ್ಯ 1, ಚಿಕ್ಕಬಳ್ಳಾಪುರ 1, ಕೋಲಾರ 1, ಶಿವಮೊಗ್ಗ-2 (ಸಿಎಂ ಸೇರಿ), ದಕ್ಷಿಣ ಕನ್ನಡ ಜಿಲ್ಲೆಗೆ 1 ಮಂತ್ರಿ ಸ್ಥಾನ ಹಂಚಿಕೆ ಮಾಡಲಾಗಿದೆ.

ಇನ್ನು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾದೇಶಿಕ ಪ್ರಾತಿನಿಧ್ಯ ಕೊಡದಿದ್ದರೂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯ ಮೂಲಕ ಅಸಮಾಧಾನ ಹತ್ತಿಕ್ಕಿದ್ದರು. ಆದರೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಾಮಾಜಿಕ ಪ್ರಾತಿನಿಧ್ಯ ಕೂಡ ಕಂಡು ಬರುತ್ತಿಲ್ಲ ಎಂದ ಆರೋಪಗಳಿವೆ.

ಜÁತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಅತಿ ಹೆಚ್ಚು ಸ್ಥಾನಗಳನ್ನು ಲಿಂಗಾಯತರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ ಬರೋಬ್ಬರಿ 9 ಜನ ಸಚಿವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದಂತೆ ಒಕ್ಕಲಿಗ ಸಮುದಾಯಕ್ಕೆ ಸೇರಿರುವ 6, ಕುರುಬ 2, ಪರಿಶಿಷ್ಟ ಜÁತಿಗೆ 3, ಪರಿಶಿಷ್ಟ ಪಂಗಡಕ್ಕೆ 2, ರಜಪೂತ್ 1, ಜೈನ 1, ಬ್ರಾಹ್ಮಣ 2 ಹಾಗೂ ಈಡಿಗ ಸಮುದಾಯಕ್ಕೆ 1 ಸಚಿವ ಸ್ಥಾನ ನೀಡಲಾಗಿದೆ.

ಈ ಎಲ್ಲ ಸಂಗತಿಗಳು ಯಡಿಯೂರಪ್ಪ ಅವರ ಸರ್ಕಾರಕ್ಕೆ ಕಂಟಕವಾಗಲಿವೆ. ಇನ್ನು ಸಂಪುಟವನ್ನು ಪುನಾರಚನೆ ಮಾಡಿ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯ ಕೊಟ್ಟಲ್ಲಿ ಯಡಿಯೂರಪ್ಪ ಅವರ ಸರ್ಕಾರಕ್ಕೆ ಮುಂದೆ ಅಂತಹ ಗಂಡಾಂತರ ಎದುರಾಗುವುದಿಲ್ಲ.

ಆದರೆ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿರುವ ಎಲ್ಲ 16 ಜನರಿಗೆ ಮಂತ್ರಿಪದವಿ ಕೊಡುವ ಅನಿವಾರ್ಯತೆಗೆ ಯಡಿಯೂರಪ್ಪ ಅವರು ಸಿಲುಕಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯಗಳನ್ನು ಪಾಲಿಸುವುದು ಅಸಾಧ್ಯ. ಹೀಗಾಗಿ ಸಂಪುಟ ವಿಸ್ತರಣೆ/ಪುನಾರಚನೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಲಿದೆ ಎನ್ನಲಾಗಿದೆ. ಅದೆಲ್ಲವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Facebook Comments