ಚುನಾವಣೆಯತ್ತ ಬಿಜೆಪಿ ಚಿತ್ತ, ದೋಸ್ತಿ ಸರ್ಕಾರದ ತಂಟೆಗೆ ಹೋಗದಂತೆ ವರಿಷ್ಠರ ಸೂಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.12- ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಸರ್ಕಾರ ರಚಿಸುವ ಉಮೇದಿನಲ್ಲಿದ್ದ ಬಿಜೆಪಿ ಹೊಸ ಜನಾದೇಶ ಪಡೆಯುವತ್ತ ಚಿತ್ತ ಹರಿಸಿದೆ.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಸರ್ಕಾರ ರಚನೆ ಮಾಡುವ ಬದಲು ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ಪಕ್ಷ ಸಜ್ಜಾಗಬೇಕೆಂದು ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಅನ್ಯ ಪಕ್ಷದಿಂದ ಬರುವ ಶಾಸಕರನ್ನು ಇಟ್ಟುಕೊಂಡು ಜನಪ್ರಿಯ ಇಲ್ಲವೆ, ಸ್ಥಿರವಾದ ಸರ್ಕಾರ ನೀಡಲು ಸಾಧ್ಯವೇ ಇಲ್ಲ.ಶಾಸಕರು ರಾಜೀನಾಮೆ ನೀಡುವುದು, ಉಪಚುನಾವಣೆ ಎದುರಿಸುವುದು, ಪಕ್ಷಕ್ಕೆ ಬರುವವರಿಗೆ ಮಣೆ ಹಾಕುವುದರಿಂದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದಂತಾಗುತ್ತದೆ. ಈ ತಾಪತ್ರಯದ ಬದಲು ಸರ್ಕಾರದ ವಿರುದ್ಧ ಪ್ರತಿದಿನ ಹೋರಾಟ ನಡೆಸುತ್ತಲೇ ಚುನಾವಣೆಗೆ ಸಜ್ಜಾಗಬೇಕೆಂದು ಸೂಚನೆ ಕೊಡಲಾಗಿದೆ.

ಪಕ್ಷಕ್ಕೆ ಯಾರೇ ಬಂದರೂ ಸ್ಥಾನಮಾನದ ಆಸೆಯಿಲ್ಲದೆ ಬರುವುದಿಲ್ಲ, ಬಂದವರಿಗೆ ಮಂತ್ರಿ ಸ್ಥಾನ ನೀಡಬೇಕು. ಇಲ್ಲವೆ ನಿಗಮ ಮಂಡಳಿಯಲ್ಲಿ ಹುದ್ದೆಗಳನ್ನು ಕೊಡಬೇಕು. 2008ರಲ್ಲಿ ಇಂತಹ ಆಡಳಿತ ಕೊಟ್ಟ ಪರಿಣಾಮ 2013ರಲ್ಲಿ ನಮಗೆ ಜನತೆ ಪ್ರತಿಪಕ್ಷದ ಸ್ಥಾನವನ್ನು ಕೊಡಲಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಶಾಸಕರು ಬಿಜೆಪಿಗೆ ಹೋಗುತ್ತೇವೆಂದು ಹೇಳುತ್ತಲೇ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಬಂದರೂ ಒಂದಲ್ಲ ಒಂದು ದಿನ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ.

ಇಂತಹ ಜಂಜಾಟದ ಬದಲು ಚುನಾವಣೆಗೆ ಹೋಗುವುದೇ ಸೂಕ್ತ ಎಂದು ವರಿಷ್ಠರು ತೀರ್ಮಾನಕ್ಕೆ ಬಂದಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ವೇಳೆ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ದೆಹಲಿಯಿಂದ ಬಂದ ಮೇಲೆ ಬಿಎಸ್‍ವೈ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ.

ಈಗ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಬಹುತೇಕ ಚುನಾವಣೆಗೆ ಸಜ್ಜಾಗಿರುವಂತೆ ಕಾಣುತ್ತಿದೆ. ನಮ್ಮದೇ ಸರ್ಕಾರ ಬರುತ್ತದೆ ಎಂದು ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಗುರಿಯಾಗಿದ್ದ ಕಮಲ ಪಡೆ ನಾಯಕರು ಈಗ ನಾವು ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಒಂದೇ ಧ್ವನಿಯಲ್ಲಿ ಹೇಳುತ್ತಿದ್ದಾರೆ.

# ಗೆದ್ದೇ ಗೆಲ್ಲುತ್ತೇವೆ:
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲರೂ ಅಚ್ಚರಿ ಪಡುವಂತ 25 ಸ್ಥಾನಗಳನ್ನು ಗೆದ್ದು ಬಿಗಿತ್ತು. 224 ವಿಧಾನಸಭಾ ಕ್ಷೇತ್ರಗಲ ಪೈಕಿ ಬಿಜೆಪಿ 151 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆಸಿದೆ.

ಇದರಲ್ಲಿ ಅಷ್ಟೇನು ಪಕ್ಷ ಪ್ರಬಲವಾಗಿಲ್ಲದ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಕರ್ನಾಟಕ ಹೊರತು ಪಡಿಸಿದರೆ. ಕನಿಷ್ಠ 120ರಿಂದ 130ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ಎಲ್ಲರಲ್ಲಿದೆ.

ಅಲ್ಲದೆ ಮೋದಿ ಅಲೆ ಪ್ರಬಲವಾಗಿರುವುದರಿಂದ ಸುಲಭವಾಗಿ ಕರ್ನಾಟಕದಲ್ಲಿ ಸ್ಪಷ್ಟ ಜನಾದೇಶ ಪಡೆಯಬಹುದು. 2018ರ ಚುನಾವಣೆಯಲ್ಲಿ ರಾಜ್ಯದ ಜನತೆ ನಮಗೆ ಬಹುಮತ ನೀಡದಿದ್ದರೂ 104ಸ್ಥಾನಗಳನ್ನು ನೀಡಿದ್ದಾರೆ.

ಎಲ್ಲಾ ಹಂತದಲ್ಲು ಪಕ್ಷ ಪ್ರಬಲವಾಗಿರುವುದರಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಕೈಬಿಡಿ ಎಂದು ವರಿಷ್ಠರು ಸಲಹೆ ಮಾಡಿದ್ದಾರೆ.

# ಅವರಾಗೆ ಬಿದ್ದು ಹೋಗಲಿ:
ದೋಸ್ತಿ ಸರ್ಕಾರ ತಾನಾಗಿಯೇ ಬಿದ್ದು ಹೋಗುತ್ತದೆ. ಯಾವ ಕಾರಣಕ್ಕೂ ಇವರು 5ವರ್ಷ ಪೂರ್ಣ ಗೊಳಿಸುವುದಿಲ್ಲ. ಲೋಕಸಭೆ ಫಲಿತಾಂಶದ ಬಳಿಕ ಉಭಯ ಪಕ್ಷಗಳ ಮುಖಂಡರು ಹಾದಿಬೀದಿಯಲ್ಲಿ ಕಿತ್ತಾಟ ಶುರುವಾಗಿದೆ.

ಕಾಂಗ್ರೆಸ್-ಜೆಡಿಎಸ್ ಮುಖಂಡರು ಒಂದಾಗಿರಬಹುದು. ಆದರೆ ಕೆಳಹಂತದಲ್ಲಿ ಈಗಲೂ ಕಾರ್ಯಕರ್ತರ ನಡುವೆ ಒಮ್ಮತ ಮೂಡುತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ನಂತರ ಭಿನ್ನಮತ ಇನ್ನಷ್ಟು ತಾರಕಕ್ಕೇರಲಿದೆ.

ಎರಡು ಪಕ್ಷಗಳ ಮುಖಂಡರು ಕಿತ್ತಾಡಿಕೊಂಡು ಸರ್ಕಾರ ಬೀಳುವವರೆಗೂ ಪ್ರತಿಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಪೂರ್ಣವಿರಾಮ ಹಾಕಿರುವ ಬಿಜೆಪಿ ನಾಯಕರು ನಾವು ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin