ಸಿಎಂ ರಾಜಿನಾಮೆಗೆ ಪಟ್ಟು : ಪರಿಷತ್‍ನಲ್ಲಿ ಬಿಜೆಪಿ ಪ್ರತಿಭಟನೆ, ನಾಳೆಗೆ ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22-ಸರ್ಕಾರ ಅಲ್ಪಮತಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನ ಪರಿಷತ್‍ನಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ ಕಾರಣ ಇಂದು ಕೂಡ ಯಾವುದೇ ಕಲಾಪ ನಡೆಯದೆ ಸದನವನ್ನು ನಾಳೆಗೆ ಮುಂದೂಡಲಾಯಿತು.

ಬೆಳಗ್ಗೆ 11 ಗಂಟೆಗೆ ಪರಿಷತ್ ಕಲಾಪ ಆರಂಭವಾಗಬೇಕಾಯಿತಾದರೂ ತಡವಾಗಿ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ಧರಣಿಯನ್ನು ಮುಂದುವರೆಸಿದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಕೈಯಲ್ಲಿ ಬಿತ್ತಿಪತ್ರಗಳನ್ನು ಹಿಡಿದುಕೊಂಡು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು.

ಯಾವುದೇ ಕಾರಣಕ್ಕೂ ಕಲಾಪ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷಗಳ ಸದಸ್ಯರ ವಿರುದ್ದ ತಿರುಗೇಟು ನೀಡಿದರು. ಕಲಾಪ ನಡೆಯಲು ಅವಕಾಶ ಕೊಡಿ. ಇನ್ನು ಎಷ್ಟು ದಿನಗಳ ಕಾಲ ಸದನವನ್ನು ಅಡ್ಡಿಪಡಿಸುತ್ತೀರಿ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳ ಧರಣಿಯ ನಡುವೆಯೇ ಸಭಾಪತಿಗಳಾದ ಪ್ರತಾಪ್ ಚಂದ್ರಶೆಟ್ಟಿ ಅವರು, ಸಭಾನಾಯಕಿ ಡಾ.ಜಯಮಾಲಾ ಅವರಿಗೆ ಚುನಾವಣಾ ಪ್ರಸ್ತಾವಗಳನ್ನು ಮಂಡಿಸಲು ಸೂಚಿಸಿದರು.

ಕರ್ನಾಟಕ ವಿಧಾನಪರಿಷತ್‍ನ ಕಾರ್ಯವಿಧಾನ ಹಾಗೂ ನಡವಳಿಕೆಯ 259 /1ನೇ ನಿಯಮದ ಅನುಸಾರವಾಗಿ ಸರ್ಕಾರಿ ಭರವಸೆಗಳ ಸಮಿತಿಗೆ 9 ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸಿದರು.

ಕರ್ನಾಟಕ ವಿಧಾನಪರಿಷತ್ ಕಾರ್ಯವಿಧಾನ ನಡವಳಿ 250/1ನೇ ಸಮಿತಿಗೆ 7 ಸದಸ್ಯರು, 349/2ನೇ ನಿಯಮದ ಅನುಸಾರವಾಗಿ ವಸತಿ ಸಮಿತಿ 5 ಸದಸ್ಯರು, 261/1ನೇ ನಿಯಮದ ಪ್ರಕಾರ ಖಾಸಗಿ ವಿಧೇಯಕ , ನಿರ್ಣಾಯಕ ಸಮಿತಿಗೆ 8 ಜನ, 245/1ನೇ ನಿಯಮದ ಅನುಸಾರ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ 5 ಜನ, 248ನೇ ನಿಯಮದ ಅನುಸಾರ ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ 5, 254/1ನೇ ನಿಯಮದ ಅನುಸಾರ ಅಧೀನ ಶಾಸನ ರಚನಾ ಸಮಿತಿಗೆ 5 ಜನ, 264ನೇ ನಿಯಮದ ಅನುಸಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಕಲ್ಯಾಣ ಸಮಿತಿಗೆ 5 ಜನ ಹಾಗೂ 267ನೇ ನಿಯಮದ ಅನುಸಾರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಗೆ 5 ಜನ ಸದಸ್ಯರನ್ನು ಚುನಾಯಿಸಬೇಕೆಂದು ಸಭಾಪತಿಗಳಿಗೆ ಮನವಿ ಮಾಡಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ, ಕೋಲಾಹಲ ಮುಂದುವರೆದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು ನಾಳೆ 11.30ಕ್ಕೆ ಸಭಾಪತಿ ಮುಂದೂಡಿದರು.

Facebook Comments

Sri Raghav

Admin