ಅಧಿವೇಶನಕ್ಕೆ ಹಾಜರಾಗುವ ಶಾಸಕರು-ಸಚಿವರಿಗೆ ಕೊರೋನಾ ಟೆಸ್ಟ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ.17-ದೇಶಾದ್ಯಂತ ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೆ.21ರಿಂದ ಪ್ರಾರಂಭವಾಗಲಿರುವ ರಾಜ್ಯ ವಿಧಾನ ಸಭೆ ಅಧಿವೇಶನದಲ್ಲಿ ಭಾಗವಹಿಸುವ ಸದಸ್ಯರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು, ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು ಎಂಬುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸದನ ಆರಂಭವಾಗುವ 72 ಗಂಟೆ ಮುಂಚಿತವಾಗಿ ಕೋವಿಡ್-19ರ ಸಂಬಂಧ ಆರ್‍ಟಿ-ಪಿಸಿಆರ್ ಪರೀಕ್ಷೆ ಒಳಗಾಗಿ ವರದಿ ಪಡೆಯಲು ಸದಸ್ಯರಿಗೆ ಸೂಚಿಸಲಾಗಿದೆ.

ಸದಸ್ಯರು ಅವರ ಕ್ಷೇತ್ರದಿಂದಲೇ ಪರೀಕ್ಷೆ ಮಾಡಿಸಿಕೊಂಡು ದೃಢೀಕರಣ ಪತ್ರ ತರಬಹುದು ಇದರ ಜೊತೆಗೆ ನಾಳೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿಯೂ ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಸದಸ್ಯರು ಇದರ ಉಪಯೋಗ ಪಡೆಯಬಹುದು ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ.

ವಿಧಾನಸಭೆಯ ಸಭಾಂಗಣ ಪ್ರವೇಶಿಸುವ ಮುನ್ನ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‍ಶೀಲ್ಡ್ ಧರಿಸಿರಬೇಕು. ಚರ್ಚೆಯಲ್ಲಿ ಭಾಗವಹಿಸುವ ಸದಸ್ಯರು ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಆಸನ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.

ಜಂಟಿ ಆಸನಗಳ ಮಧ್ಯೆ ಪಾರದರ್ಶಕ ಫೈಬರ್ ಶೀಟು ಅಳವಡಿಸಲಾಗಿದೆ. ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಲವು ಆಸನಗಳನ್ನು ಖಾಲಿ ಬಿಡಲಾಗಿದ್ದು, ಅಂತಹ ಆಸನಗಳಲ್ಲಿ ಕುಳಿತುಕೊಳ್ಳುವಂತಿಲ್ಲ.

ಸದಸ್ಯರ ಆಪ್ತ ಸಹಾಯಕರು ಹಾಗೂ ಗನ್ ಮ್ಯಾನ್‍ಗಳಿಗೆ ವಿಧಾನಸೌಧಕ್ಕೆ ಆಗಮಿಸಲು ಅವಕಾಶ ಇದೆ. ಆದರೆ, ವಿಧಾನಸೌಧದ ಮೊದಲ ಮಹಡಿಗೆ ಪ್ರವೇಶ ಇರುವುದಿಲ್ಲ.

ನೆಲ ಮಹಡಿಯಲ್ಲಿರುವ ಬ್ಯಾಂಕ್ವೆಟ್ ಹಾಲಿನ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ವಿಧಾನಸಭಾ ಸಭಾಂಗಣದ ಮೊಗಸಾಲೆಯಲ್ಲಿದ್ದ ಕ್ಯಾಂಟೀನ್ ಸೌಲಭ್ಯವನ್ನು ವಿಧಾನಸೌಧದ ಮೊದಲನೇ ಮಹಡಿಯ ಪೂರ್ವಭಾಗದಲ್ಲಿರುವ ಸೆಂಟ್ರಲ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮೊಗಸಾಲೆಗಳಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆಗಳು.

ನಿಯಮ 69ರಡಿ ಸೂಚನೆಗಳು, ಶೂನ್ಯವೇಳೆ ಇತ್ಯಾದಿ ಸೂಚನೆಗಳಿಗೆ ಸರ್ಕಾರದವರು ನೀಡುವ ಲಿಖಿತ ಉತ್ತರಗಳನ್ನು ಸದನದಲ್ಲಿ ಮಂಡಿಸಿದ ನಂತರ ಸದಸ್ಯರಿಗೆ ಇ-ಮೇಲ್ ಮೂಲಕ ಕಳುಹಿಸಲಾಗುವುದು.

ಪ್ರತಿದಿನ ಬೆಳಗ್ಗೆ ,ಭೋಜನ ವಿರಾಮ ಹಾಗೂ ಸದನ ಮುಕ್ತಾಯವಾದ ನಂತರ ವಿಧಾನಸಭಾ ಸಭಾಂಗಣವನ್ನು ಅದರ ಸುತ್ತಮುತ್ತಲಿನ ಎಲ್ಲ ಆವರಣವನ್ನು ಸ್ಯಾನಿಟೈಸ್ ಮಾಡಲಾಗುವುದು. ಸದಸ್ಯರು ತಮ್ಮ ಕಾಗದ ಪತ್ರ, ಫೇಸ್‍ಶೀಲ್ಡ್, ಮಾಸ್ಕ್‍ಗಳನ್ನು ಆಸನಗಳ ಬಳಿ ಬಿಡದೆ ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು.

ಕೋವಿಡ್-19ರ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನ ವೀಕ್ಷಿಸಲು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin