ಭ್ರಷ್ಟಾಚಾರ ಆರೋಪ ಮಾಡಿದ ಸಿದ್ದರಾಮಯ್ಯ-ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ ಮತ್ತು ಪ್ರತ್ಯಾರೋಪಕ್ಕೆ ಗುರಿಯಾಗಿರುವ ವೈದ್ಯಕೀಯ ಉಪಕರಣಗಳ ಖರೀದಿ ಪ್ರಕರಣ ಇದೀಗ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಅಣಿಯಾಗಿದೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2000 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿದೆ.

ಎ.ಪಿ.ಪುಲಿಕೇಶಿ ಎಂಬುವರ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‍ಗೆ ಲೀಗಲ್ ನೋಟಿಸ್ ಜಾರಿ ಮಾಡಿರುವ ಬಿಜೆಪಿ, ತಾವು ಮಾಡಿರುವ ಆರೋಪಗಳಿಗೆ ಭೇಷರತ್ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.

ಈ ಬಗ್ಗೆ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್‍ನಾರಾಯಣ ಮತ್ತು ಪಕ್ಷದ ವಕ್ತಾರ ಎ.ಎಚ್.ಆನಂದ್ ಅವರುಗಳು ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಪಕ್ಷ ಕಾಂಗ್ರೆಸ್ ಈವರೆಗೂ ಏಕೆ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಎನ್.ರವಿಕುಮಾರ್ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2000 ಕೋಟಿ ಅವ್ಯವಹಾರ ನಡೆದಿದೆ ಎಂದು ಆಧಾರರಹಿತ ಆರೋಪ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ನಯಾಪೈಸೆಯೂ ಭ್ರಷ್ಟಾಚಾರ ನಡೆದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರತಿಯೊಂದು ಉಪಕರಣಗಳ ಖರೀದಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಕೋವಿಡ್ -19 ಬಂದ ವೇಳೆ ಅಂದಿನ ಮಾರುಕಟ್ಟೆ ದರಕ್ಕೂ ಪ್ರಸ್ತುತ ಈಗಿನ ಮಾರುಕಟ್ಟೆ ದರಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ.

ಪ್ರಾರಂಭದಲ್ಲಿ ಪ್ರತಿಯೊಂದು ಉಪಕರಣಗಳ ಬೆಲೆ ಹೆಚ್ಚಾಗಿದ್ದರಿಂದ ಅಂದಿನ ಬೆಲೆಗೆ ಖರೀದಿ ಮಾಡಲಾಗಿದೆ. ಆದರೆ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದೆ ಕೇವಲ ಪ್ರಚಾರಕ್ಕಾಗಿ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ಕಳಂಕ ತರಬೇಕೆಂಬ ಏಕೈಕ ಕಾರಣಕ್ಕಾಗಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಅಧಿಕೃತವಾಗಿ ದಾಖಲೆಗಳ ಸಮೇತ ಎಷ್ಟೆಷ್ಟು ಪ್ರಮಾಣದಲ್ಲಿ ಖರೀದಿ ಮಾಡಿದೆ ಎಂಬುದನ್ನು ಅಂಕಿಸಂಕಿಗಳ ಸಮೇತ ವಿವರ ನೀಡಿದೆ. ಆದರೂ ಪ್ರತಿದಿನ ಸುಳ್ಳುಗಳನ್ನು ಹೇಳಿ ಜನತೆಯಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಸರ್ಕಾರ ಈವರೆಗೂ ಖರೀದಿ ಮಾಡಿರುವ ಉಪಕರಣಗಳ ಒಟ್ಟು ಮೊತ್ತವೇ 500 ಕೋಟಿ ದಾಟುವುದಿಲ್ಲ. ಪ್ರತಿಪಕ್ಷದವರು 2000 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಾರೆ. 500 ಕೋಟಿಗೂ 2000 ಕೋಟಿಗೂ ವ್ಯತ್ಯಾಸ ಪ್ರತಿಪಕ್ಷದ ನಾಯಕರಾಗಲಿ ಇಲ್ಲವೇ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಿಲ್ಲವೇ ಎಂದು ರವಿಕುಮಾರ್ ಪ್ರಶ್ನಿಸಿದರು.

ನೀವು ಮಾಡಿರುವ ಆರೋಪಗಳಿಗೆ ರಾಜ್ಯದ ಜನತೆಯ ಮುಂದೆ ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ, ಪಕ್ಷದ ವಕ್ತಾರ ಎ.ಎಚ್.ಆನಂದ್ ಉಪಸ್ಥಿತರಿದ್ದರು.

Facebook Comments

Sri Raghav

Admin