ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದ ಉಚ್ಛಾಟಿತ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿ  ಅಧ್ಯಕ್ಷ ಸ್ಥಾನಕ್ಕೆ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.11- ತಮ್ಮ ಗೆಲುವಿಗೆ ಸಹಕರಿಸಿದ ಬಿಬಿಎಂಪಿ ಸದಸ್ಯರಿಗೆ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡಬೇಕು ಜತೆಗೆ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ನಗರದ ನೂತನ ಮೂವರು ಶಾಸಕರು ಹೊಸ ವರಸೆ ಪ್ರಾರಂಭಿಸಿದ್ದಾರೆ.

ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಕೆಆರ್ ಪುರಂ ಕ್ಷೇತ್ರದ ಭೈರತಿ ಬಸವರಾಜ್, ಯಶವಂತಪುರ  ಕ್ಷೇತ್ರದ ಎಸ್.ಟಿ.ಸೋಮಶೇಖರ್ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕೆ.ಗೋಪಾಲಯ್ಯ ಅವರು ತಮ್ಮ ಬೆಂಬಲಿತ ಬಿಬಿಎಂಪಿ ಸದಸ್ಯರ ಪರವಾಗಿ ನಿಂತಿದ್ದಾರೆ.

ಈ ಮೂವರ ಗೆಲುವಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೆಂಬಲಿತ ಬಿಬಿಬಿಎಂಪಿ ಸದಸ್ಯರು ಶ್ರಮಿಸಿದ್ದರು. ಆದರೆ, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಆ ಸದಸ್ಯರನ್ನು ಕಾಂಗ್ರೆಸ್, ಜೆಡಿಎಸ್ ಉಚ್ಚಾಟಿಸಿವೆ. ಹಾಗಾಗಿ ಅವರೆಲ್ಲ ಈಗ ಪಕ್ಷೇತರ ಸದಸ್ಯರಾಗಿದ್ದಾರೆ.  ಸದ್ಯದಲ್ಲೇ ನಡೆಯಲಿರುವ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಪ್ರಮುಖ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವಂತೆ ಹೊಸ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಟ್ಟು ಹಾಕಿದ್ದಾರೆ. ಇದಕ್ಕೆ ಬಿಎಸ್‍ವೈ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದೇ ಆದರೆ ಕೆ.ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿ ಒಲಿಯಲಿದೆ. ಅದೇ ರೀತಿ ಭೈರತಿ ಬಸವರಾಜ್ ಅವರ ಬೆಂಬಲಿಗರಲ್ಲಿ ಒಬ್ಬರಾದ ಶ್ರೀಕಾಂತ್ ಪುಟ್ಟ ಅಥವಾ ಎಂ.ಟಿ.ಬಿ.ನಾಗರಾಜ್ ಅವರ ಪುತ್ರ ಪುರುಷೋತ್ತಮ್ ಅವರಲ್ಲೊಬ್ಬರಿಗೆ ಪ್ರಮುಖ ಸ್ಥಾಯಿ ಸಮಿತಿ ಒಲಿಯುವ ಸಾಧ್ಯತೆಯಿದೆ. ಹಾಗೆಯೇ ಎಸ್.ಟಿ.ಸೋಮಶೇಖರ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹೇರೋಹಳ್ಳಿ ರಾಜಣ್ಣ ಅಥವಾ ಆರ್ಯ ಶ್ರೀನಿವಾಸ್ ಅವರಲ್ಲಿ ಒಬ್ಬರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗ್ಯಾರಂಟಿ.

ಶಿವಾಜಿನಗರದಲ್ಲಿ ರೋಷನ್‍ಬೇಗ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೂ ಸರವಣ ಪರ ಗುಣಶೇಖರ್ ಹಾಗೂ ನೇತ್ರಾವತಿ ಕೆಲಸ ಮಾಡಿದ್ದರು. ಹಾಗಾಗಿ ಗುಣಶೇಖರ್‍ಗೆ ಒಂದು ಸ್ಥಾಯಿ ಸಮಿತಿ ಒಲಿದರೂ ಅಚ್ಚರಿ ಪಡುವಂತಿಲ್ಲ.

ಇದಲ್ಲದೆ, ಮುಂದಿನ ವರ್ಷ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ನೂತನ ಶಾಸಕರ ಗೆಲುವಿಗೆ ಶ್ರಮಿಸಿದ ಎಲ್ಲ ಸದಸ್ಯರಿಗೆ ಟಿಕೆಟ್ ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments