ಸವದಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ, ಬಿಜೆಪಿ ಸಭೆಗೆ ತೆರಳದಂತೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17-ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ ತೀವ್ರಗೊಂಡಿದೆ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಕೆರಳಿ ಕೆಂಡವಾಗಿರುವ ಸವದಿ ಬೆಂಬಲಿಗರು ಇಂದು ಪಕ್ಷದ ಪೂರ್ವಭಾವಿ ಸಭೆಗೆ ತೆರಳದಂತೆ ಸವದಿಗೆ ಘೇರಾವ್ ಹಾಕಿದ ಘಟನೆ ಅಥಣಿಯಲ್ಲಿ ನಡೆದಿದೆ.

ಮಹೇಶ್ ಕುಮಟಳ್ಳಿ ನಾಳೆ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಅಥಣಿ ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಶಾಸಕರಾದ ರಾಜೀವ್, ದುರ್ಯೋಧನ ಐಹೊಳೆ ಮುಂತಾದವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ಸಭೆಗೆ ತೆರಳದಂತೆ ಲಕ್ಷ್ಮಣ್ ಸವದಿ ಅವರಿಗೆ ಅವರ ಬೆಂಬಲಿಗರು ಘೇರಾವ್ ಹಾಕಿದರು.

ಅಥಣಿ ಕ್ಷೇತ್ರದಲ್ಲಿ ಅನ್ಯ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯವರಿಗೆ ಮನ್ನಣೆ ನೀಡದೆ ಅನ್ಯಾಯ ಮಾಡಲಾಗಿದೆ. ಯಾವುದೇ ಕಾರಣಕ್ಕೂ ನೀವು ಈ ಸಭೆಗೆ ಹೋಗಬಾರದು ಎಂದು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುಖಂಡರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆಕ್ರೋಶಗೊಂಡ ಬೆಂಬಲಿಗರನ್ನು ಮನವೊಲಿಸುವ ಪ್ರಯತ್ನವನ್ನು ನಾಯಕರು ಮಾಡಿದರು. ಖುದ್ದು ಲಕ್ಷ್ಮಣ್ ಸವದಿ ಅವರೇ ತಮ್ಮ ಬೆಂಬಲಿಗರಿಗೆ ಮನವಿ ಮಾಡಿ ದಯಮಾಡಿ ಸಭೆಗೆ ತೆರಳಲು ಬಿಡಿ. ಹೈಕಮಾಂಡ್ ಅನುಮತಿಯಂತೆ ನಾವು ಕೆಲಸ ಮಾಡಬೇಕಾಗಿದೆ. ಪ್ರತಿಭಟನೆ ಮಾಡಿದರೆ ಬೇರೆ ಸಂದೇಶ ಹೋಗುತ್ತದೆ ಎಂದು ಹೇಳಿದರು.

ಬೆಂಬಲಿಗರ ಒತ್ತಡದ ನಡುವೆಯೂ ಸವದಿ ಪೂರ್ವಭಾವಿ ಸಭೆಗೆ ತೆರಳಿದರು. ಈ ಸಂದರ್ಭದಲ್ಲಿ ಬೆಂಬಲಿಗರ ಮನವೊಲಿಕೆಗೆ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ , ರಾಯಭಾಗದ ಕೇತ್ರದ ದುರ್ಯೋಧನ ಐಹೊಳೆ ವಿರುದ್ಧವೂ ಹರಿಹಾಯ್ದ ಬಿಜೆಪಿ ಕಾರ್ಯಕರ್ತರು ನೀವೂ ಕೂಡ ರಾಜೀನಾಮೆ ಕೊಟ್ಟು ಹೊರಬನ್ನಿ. ಇಲ್ಲಿ ಮೂಲ ಬಿಜೆಪಿಗರಿಗೆ ಅನ್ಯಾಯವಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

Facebook Comments

Sri Raghav

Admin