ಕೊಲ್ಕತ್ತಾ : ರಕ್ತದಾನ ಶಿಬಿರದಲ್ಲಿ ನಡೆದ ಬಿಜೆಪಿ-ಟಿಎಂಸಿ ಮಾರಾಮಾರಿಯಲ್ಲಿ ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಜು.22- ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವೆ ರಣರಂಗಕ್ಕೆ ಕಾರಣವಾಗಿರುವ ಮತ್ತೆ ಘರ್ಷಣೆ, ಹಿಂಸಾಚಾರ ಭುಗಿಲೆದ್ದಿದೆ. ರಕ್ತದಾನ ಶಿಬಿರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭುಗಿಲೆದ್ದ ಮಾರಾಮಾರಿಯಲ್ಲಿ ಎರಡು ಪಕ್ಷದ ಹಲವು ಮಂದಿ ತೀವ್ರ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಕೊಲ್ಕತ್ತಾದ ಬೆಹಲ್ ಪ್ರದೇಶದಲ್ಲಿ ನಡೆದಿದೆ.

ಮತ್ತೆ ಹಿಂಸಾಚಾರ ಉಲ್ಭಣಗೊಳ್ಳುವ ಸಾಧ್ಯತೆ ಇದ್ದು , ಆ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿನ್ನೆ ರಾತ್ರಿ ಬೇಹಲ್ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕ ದೀಪಾಂಕರ್ ಬಾನಿಕ್ ರಕ್ತದಾನ ಶಿಬಿರ ಆಯೋಜಿಸಿದ್ದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಟದೊಂದಿಗೆ ಘರ್ಷಣೆ ನಡೆಯಿತು.

ಈ ಘಟನೆಯಲ್ಲಿ ದೀಪಾಂಕರ್ ಸೇರಿದಂತೆ ಎರಡು ಪಕ್ಷಗಳ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತಷ್ಟು ಉಲ್ಬಣಗೊಳ್ಳಬಹುದಾದ ಘರ್ಷಣೆಯನ್ನು ನಿಯಂತ್ರಿಸಿದರು.

ಲೋಕಸಭಾ ಚುನಾವಣೆ ಮತದಾನ ಫಲಿತಾಂಶ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಉಭಯ ಪಕ್ಷಗಳಿಗೂ ಸೇರಿದ ಅನೇಕರು ಹತರಾಗಿದ್ದರು.

ಪರಸ್ಪರ ಆರೋಪ-ಪ್ರತ್ಯಾರೋಪಗಳೊಂದಿಗೆ ಎರಡು ಪಕ್ಷಗಳ ಮುಖಂಡರು ವಾಗ್ವಾದಕ್ಕೆ ಇಳಿದಿದ್ದರು. ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು , ಸಣ್ಣ ಪುಟ್ಟ ವಿಚಾರಕ್ಕೂ ಘರ್ಷಣೆ, ಹಿಂಸಾಚಾರ ಮರು ಕಳಿಸುವ ಸಾಧ್ಯತೆ ಇದೆ.

Facebook Comments