ರಾಜ್ಯದಲ್ಲಿ ಮತಗಳಿಕೆಯಲ್ಲಿ ಬಿಜೆಪಿ ದಾಖಲೆ, ಕಾಂಗ್ರೆಸ್-ಜೆಡಿಎಸ್ ಭಾರೀ ಕುಸಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ದೇಶಾದ್ಯಂತ ಬೀಸಿದ ಮೋದಿ ಅಲೆಯಲ್ಲಿ ಎಲ್ಲಾ ಪಕ್ಷಗಳು ಕೊಚ್ಚಿ ಹೋಗಿದ್ದು, ಕರ್ನಾಟಕದಲ್ಲಿ ಇತಿಹಾಸದಲ್ಲೇ ಬಿಜೆಪಿ ದಾಖಲಾರ್ಹವಾದಷ್ಟು ಮತ ಗಳಿಕೆಯನ್ನು ಮಾಡಿದೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ 2009ರ ಚುನಾವಣೆ ಗಿಂತಲೂ ಶೇ.2.2ರಷ್ಟು ಹೆಚ್ಚು ಮತ ಗಳಿಸಿದ್ದ ಬಿಜೆಪಿ ಈ ಬಾರಿ ಮೋದಿ ಸುನಾಮಿಯಿಂದಾಗಿ ಈ ಹಿಂದಿನ ವರ್ಷಕ್ಕಿಂತಲೂ  ಶೇ.8.01ರಷ್ಟು ಹೆಚ್ಚು ಮತ ಗಳಿಸಿ ಕರ್ನಾಟಕದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ.

ಚುನಾವಣಾ ಪೂರ್ವ ಮೈತ್ರಿಮಾಡಿಕೊಂಡು ಇನ್ನಿಲ್ಲದ ಕಸರತ್ತು ನಡೆಸಿದ ದೋಸ್ತಿಗಳು ಸ್ಥಾನ ಗಳಿಕೆಯಲ್ಲಷ್ಟೇ ಅಲ್ಲ, ಮತ ಗಳಿಕೆಯಲ್ಲೂ ನೆಲಕಚ್ಚಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಒಂದಾಗಿದ್ದರಿಂದ ಹಿಂದಿನ ಲೆಕ್ಕಾಚಾರದ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಸರಾಸರಿ ಶೇ.52ರಷ್ಟು ಮತ ಗಳಿಸಬೇಕಿತ್ತು. ಆದರೆ ದೋಸ್ತಿ ಪಕ್ಷಗಳು ಒಟ್ಟು ಶೇ.41.52ರಷ್ಟು ಮತ ಗಳಿಸಿವೆ. ಬಿಜೆಪಿಯೊಂದೇ ಶೇ.51.38ರಷ್ಟು ಮತ ಗಳಿಸಿದೆ.

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.31.88ರಷ್ಟು, ಜೆಡಿಎಸ್ ಶೇ.9.67, ಬಿಜೆಪಿ ಶೇ.51.38, ಬಿಎಸ್‍ಪಿ ಶೇ.1.17, ಸಿಪಿಐ, ಸಿಪಿಎಂ ಎರಡೂ ಸೇರಿ ಶೇ.1.10, ನೋಟಾ ಶೇ.0.71, ಇತರೆ ಶೇ.5.04ರಷ್ಟು ಮತ ಗಳಿಕೆಯಾಗಿದೆ.

ಬಿಜೆಪಿ ಸ್ಥಾನ ಗಳಿಕೆಯಲ್ಲಂತೂ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ 25 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್-ಜೆಡಿಎಸ್ ತಲಾ ಒಂದರಲ್ಲಿ ಗೆದ್ದರೆ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದಾಗಲೂ ಈ ರೀತಿಯ ಹೀನಾಯ ಸ್ಥಿತಿ ಎಂದೂ ಬಂದಿರಲಿಲ್ಲ. ಎರಡೂ ಪಕ್ಷಗಳು ತಮ್ಮ ಸಾಮಥ್ರ್ಯದನುಸಾರ ಮತ ಗಳಿಕೆ ಮಾಡಿಕೊಳ್ಳುತ್ತಿದ್ದವು. ಕಾಂಗ್ರೆಸ್ ಮತ ಗಳಿಕೆ ಹೆಚ್ಚಿದ್ದರೂ, ಸ್ಥಾನ ಗಳಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿತ್ತು. ಈ ಬಾರಿ ಸ್ಥಾನ ಗಳಿಕೆ ಮತ್ತು ಮತ ಗಳಿಕೆ ಎರಡರಲ್ಲೂ ಕಾಂಗ್ರೆಸ್ ಪಲ್ಟಿ ಹೊಡೆದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ