ಬಿಜೆಪಿಯಿಂದ ಶಿವಮೊಗ್ಗ ಕಿತ್ತುಕೊಳ್ಳಲು ದೋಸ್ತಿಗಳು ಹರಸಾಹಸ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.22- ಸಕ್ಕರೆ ಜಿಲ್ಲೆ ಮಂಡ್ಯನಂತರ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತದಾನಕ್ಕೆ ಎರಡೇ ದಿನ ಉಳಿದಿರುವಂತೆ ಘಟಾನುಘಟಿ ನಾಯಕರು ದಾಂಗುಡಿ ಇಡುತ್ತಿದ್ದಾರೆ.

ತಮ್ಮ ಪುತ್ರನನ್ನು ಗೆಲ್ಲಿಸಲೇಬೇಕಾದ ಸಂದಿಗ್ಧ ಸ್ಥಿತಿಗೆ ಬಿ.ಎಸ್.ಯಡಿಯೂರಪ್ಪ ಸಿಲುಕಿದ್ದಾರೆ. ಯಡಿಯೂರಪ್ಪನವರನ್ನು ತವರು ಜಿಲ್ಲೆಯಲ್ಲಿ ಶಿಕಾರಿ ಮಾಡಲು ದೋಸ್ತಿ ಪಕ್ಷಗಳು ಕೂಡ ಭರ್ಜರಿಯಾಗಿ ರಣರಂಗ ಪ್ರವೇಶ ಮಾಡಿವೆ. ಹೀಗಾಗಿ ಶಿವಮೊಗ್ಗ ಈ ಬಾರಿ ರಾಜ್ಯದಲ್ಲೇ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರವೆನಿಸಿದೆ.

ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಉಳಿದಿರುವ ಎರಡು ದಿನಗಳಲ್ಲಿ ಮತದಾರರನ್ನು ಓಲೈಸಿಕೊಳ್ಳಲು ನಾನಾ ರೀತಿಯ ಆಸೆ ಆಮಿಷವನ್ನು ಒಡ್ಡಲಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.

ಬೆಳಗ್ಗೆ ಹುಬ್ಬಳ್ಳಿಯಿಂದ ಆಗಮಿಸಿದ ಅಮಿತ್ ಷಾ ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಯಡಿಯೂರಪ್ಪ, ಈಶ್ವರಪ್ಪ , ಆಯನೂರು ಮಂಜುನಾಥ್, ಮತ್ತಿತರ ನಾಯಕರ ಜೊತೆ ಭರ್ಜರಿ ರೋಡ್ ಶೋ ನಡೆಸಿ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದರು.  ಅಮಿತ್ ಷಾ ಆಗಮನದಿಂದ ಭದ್ರಾವತಿ ಇಂದು ಅಕ್ಷರಶಃ ಕೇಸರಿಮಯವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಮೋದಿ ಮೋದಿ ಎಂಬ ಜೈಕಾರ ಘೋಷ ಕೇಳಿಬಂದವು.

ಭದ್ರಾವತಿ ನಂತರ ಅಮಿತ್ ಷಾ ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ಅಮಿತ್ ಷಾ ಅವರನ್ನು ಸ್ವಾಗತಿಸಲು ಹಾಕಲಾಗಿದ್ದ ಬಿಜೆಪಿ ಬಾವುಟಗಳನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದು ಬಿಜೆಪಿಗೆ ತುಸು ಇರಿಸುಮುರಿಸು ತಂದಿತು.ರಂಗಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದ ಅಮಿತ್ ಶಾ, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಮಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸಾಥ್ ನೀಡಿದರು. ಅಲ್ಲದೆ ತೀರ್ಥಹಳ್ಳಿಯ ಟಿ.ಎ.ಪಿ.ಎಂ.ಎಸ್. ಪ್ರಾಂಗಣದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.

ಶಿವಮೊಗ್ಗದಲ್ಲಿ ದೇವೇಗೌಡ ಮತಭೇಟೆ :  ಶಿವಮೊಗ್ಗದ ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ರಾಷ್ಟ್ರ ರಾಜ್ಯ ನಾಯಕರು ಚುನಾವಣಾ ಪ್ರಚಾರ ನಡೆಸಿದರೆ ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪನವರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಶಿವಮೊಗ್ಗದ ಉಂಬ್ಳೆಬೈಲಿನಲ್ಲಿ ರೋಡ್ ಶೋ ನಡೆಸಿದರು.

ಈಗಾಗಲೇ ವಿಜಯಪುರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಲುವಾಗಿ ಉತ್ತರ ಕರ್ನಾಟಕದಲ್ಲಿ ಠಿಕಾಣಿ ಹೂಡಿರುವ ದೇವೇಗೌಡ ಹಾಗೂ ಕುಮಾರಸ್ವಾಮಿ ಅಲ್ಲಿಂದ ಬೆಳಗ್ಗೆಯೇ ತೆರಳಿ ನೇರವಾಗಿ ಶಿವಮೊಗ್ಗಕ್ಕೆ ಆಗಮಿಸಿ ರೋಡ್ ಶೋ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇನ್ನೂ ಕಾಂಗ್ರೆಸ್‍ನ ಮತ್ತೋರ್ವ ರೆಬಲ್ ಲೀಡರ್ ಡಿ.ಕೆ. ಶಿವಕುಮಾರ್ ಸಾಗರದಲ್ಲಿ ಪ್ರಚಾರ ನಡೆಸಿದ್ದಾರೆ.

Facebook Comments