ಕಾಶ್ಮೀರದಲ್ಲಿ ಮೂವರು ಬಿಜೆಪಿ ಮುಖಂಡರ ಹತ್ಯೆ ಮಾಡಿದ ಉಗ್ರರ ಹೆಡೆಮುರಿಕಟ್ಟಲು ಕೇಂದ್ರ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.30- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಿಜೆಪಿ ನಾಯಕರನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ಮರು ಕಳಿಸುತ್ತಿವೆ.  ಕುಲ್ಗಾಂ ಜಿಲ್ಲೆಯಲ್ಲಿ ನಿನ್ನೆ ಮೂವರು ಬಿಜೆಪಿ ನಾಯಕರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಈ ಕೃತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಅನೇಕ ಮುಖಂಡರು ಖಂಡಿಸಿದ್ದಾರೆ.

ಈ ಕೃತ್ಯದಿಂದಾಗಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದರನ್ನು ಸದೆಬಡಿಯಲು ಭದ್ರತಾ ಪಡೆಗಳು ಕಾರ್ಯಾಚರಣೆಗೆ ಇಳಿದಿವೆ.  ಕುಲ್ಗಾಂ ಜಿಲ್ಲೆಯ ಬಾಜಿಗುಂಡ್‍ನ ವೈ.ಕೆ.ಪೊರಾ ಪ್ರದೇಶದಲ್ಲಿ ನಿನ್ನೆ ರಾತ್ರಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಬಿಜೆಪಿ ಮುಖಂಡಾದ ಫಿದಾ ಹುಸೇನ್, ಉಮರ್ ಹುಸೇನ್ ಮತ್ತು ಉಮರ್ ರಂಜನ್ ಅವರ ಮೇಲೆ ಮನ ಬಂದಂತೆ ಗುಂಡು ಹಾರಿಸಿ ಪರಾರಿಯಾದರು. ಹುಸೇನ್ ಸ್ಥಳದಲ್ಲೇ ಹತರಾದರೆ, ಉಮರ್ ಮತ್ತು ರಂಜನ್ ಬಾಜಿಗುಂಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ನಡೆಸಿ ಅನೇಕರನ್ನು ಕೊಂದಿದ್ದಾರೆ. ಇತ್ತೀಚೆಗೆ ಉಗ್ರರು ಬಂಡಿಪೊರಾದಲ್ಲಿ ದಾಳಿ ನಡೆಸಿ ಬಿಜೆಪಿ ಮುಖಂಡ ಶೇಖ್ ವಾಸಿಂ ಬ್ಯಾರಿ ಮತ್ತು ಅವರ ಇಬ್ಬರು ಬೆಂಬಲಿಗರನ್ನು ಹತ್ಯೆ ಮಾಡಿದ್ದಾರೆ.

ಭಾರತೀಯ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಆ.5ರಂದು ರದ್ದುಗೊಳಿಸಿದ ನಂತರ ಕಣಿವೆ ಪ್ರಾಂತ್ಯದಲ್ಲಿ ಉಗ್ರರು ಬಿಜೆಪಿ ಮುಖಂಡರನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅಲ್ಲದೇ ಭದ್ರತಾಪಡೆಗಳ ಮೇಲೆ ಆಕ್ರಮಣಗಳು ಮುಂದುವರಿದಿವೆ.

ಈ ಎಲ್ಲ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಗ್ರರಿಗೆ ಶಾಸ್ತಿ ಮಾಡಲು ನಿರ್ಧರಿಸಿದೆ. ಕಣಿವೆ ಪ್ರಾಂತ್ಯದಲ್ಲಿನ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳನ್ನು ಸದೆಬಡಿಯಲು ಸೇನೆ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ.

Facebook Comments