ಬಿಜೆಪಿಯಲ್ಲಿ ಬಂಡಾಯದ ಕಹಳೆ, ಬಿಎಸ್‌ವೈ ಮನೆ ಮುಂದೆ ಶರತ್ ಬಚ್ಚೇಗೌಡ ಬೆಂಬಲಿಗರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.24- ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರುವಾಗಲೇ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿರುವ ಆಕಾಂಕ್ಷಿಗಳಿಂದ ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿದೆ.  ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಹೊಸಕೋಟೆ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಬೇಕೆಂದು ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಪಟ್ಟು ಹಿಡಿದಿದ್ದಾರೆ.

ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸದ ಮುಂದೆ ಇಂದು ನೂರಾರು ಸಂಖ್ಯೆಯ ಬೆಂಬಲಿಗರು ಪ್ರತಿಭಟನೆ ನಡೆಸಿ ಶರತ್ ಬಚ್ಚೇಗೌಡರಿಗೆ ಟಿಕೆಟ್ ನೀಡಲೇಬೇಕು. ಯಾವುದೇ ಕಾರಣಕ್ಕೂ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‍ಗೆ ಬೆಂಬಲ ನೀಡುವುದಿಲ್ಲ ಎಂದು ಕಠಿಣ ಸಂದೇಶ ರವಾನಿಸಿದರು.  ಒಂದು ಹಂತದಲ್ಲಿ ಬೆಂಬಲಿಗರು ಬಿಎಸ್‍ವೈ ನಿವಾಸಕ್ಕೆ ನುಗ್ಗುವ ಪ್ರಯತ್ನ ನಡೆಸಿದರಾದರೂ ಆ ವೇಳೆಗಾಗಲೇ ಸುತ್ತಮುತ್ತ ಬ್ಯಾರಿಕೇಡ್‍ಗಳನ್ನು ಹಾಕಿ ಭದ್ರತೆ ಏರ್ಪಡಿಸಿ,ಕೇವಲ ಐದು ಮಂದಿಯನ್ನು ಮಾತ್ರ ನಿವಾಸದೊಳಗೆ ಬಿಡಲಾಯಿತು.

ಸಂಸದ ಬಿ.ಎನ್.ಬಚ್ಚೇಗೌಡ, ಸಹೋದರ ಗೋಪಾಲಗೌಡ, ಶರತ್ ಬಚ್ಚೇಗೌಡ, ಹೊಸಕೋಟೆ ಮಂಡಳ ಬಿಜೆಪಿ ಅಧ್ಯಕ್ಷ ಹುಲ್ಲೂರು ಮಂಜುನಾಥ್ ಹಾಗೂ ಮತ್ತೋರ್ವ ಮುಖಂಡರನ್ನು ಮಾತ್ರ ಯಡಿಯೂರಪ್ಪನವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು.

ಎಂಟಿಬಿ ನಾಗರಾಜ್ ಬಿಜೆಪಿಯನ್ನೇ ನಂಬಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ ಮೋಸ ಮಾಡಲು ಸಾದ್ಯವೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಮಗನಿಗೆ ಟಿಕೆಟ್ ನೀಡಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ನಿಮಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇವೆ. ಈಗಿನ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಿ. ಶರತ್ ಬಚ್ಚೇಗೌಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಶರತ್ ಬಚ್ಚೇಗೌಡ ಬಿಜೆಪಿ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಬಚ್ಚೇಗೌಡರಿಗೆ ಬಿಎಸ್‍ವೈ ಸೂಚಿಸಿದ್ದಾರೆ. ಶರತ್ ನನ್ನ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಬಂಡಾಯ ಏಳದಂತೆ ಆತನಿಗೆ ನಾನು ಹೇಳಿದ್ದೇನೆ. ಅಂತಿಮವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದು ಅವನ ಕೈಯಲ್ಲಿದೆ ಎಂದು ಬಚ್ಚೇಗೌಡ ಕೂಡ ಕೈ ಚೆಲ್ಲಿದ್ದಾರೆ.ಅಲ್ಲದೆ ಯಡಿಯೂರಪ್ಪ ತಮ್ಮ ನಿವಾಸದಿಂದ ಹೊರಬರುತ್ತಿದ್ದಂತೆ ಕಾರಿಗೆ ಬೆಂಬಲಿಗರು ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗವೂ ನಡೆಯಿತು.

ಹೊಸಕೋಟೆ ಮಾತ್ರವಲ್ಲದೆ ಮಹಾಲಕ್ಷ್ಮಿಲೇಔಟ್‍ನಲ್ಲೂ ಬಿಜೆಪಿಯಲ್ಲಿ ಬಂಡಾಯದ ಕಾವು ಜೋರಾಗುತ್ತಿದೆ. ಉಪಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಬಿಎಂಪಿ ಮಹಾಪೌರ ಎಸ್.ಹರೀಶ್ ಕೂಡ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ.  ಅನರ್ಹಗೊಂಡಿರುವ ಗೋಪಾಲಯ್ಯ ಇಲ್ಲವೇ ಅವರ ಕುಟುಂಬದವರಿಗೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ವಿರೋಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಸ್.ಹರೀಶ್ ಜೊತೆ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರರು ಗೋಪಾಲಯ್ಯನವರಿಗೆ ಟಿಕೆಟ್ ಕೊಡಲೇಬಾರದೆಂದು ಪಟ್ಟು ಹಿಡಿದಿದ್ದಾರೆ.

30 ವರ್ಷಗಳಿಂದ ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದೇವೆ. ಅಧಿಕಾರದ ಆಸೆಗಾಗಿ ಬಂದವರಿಗೆ ಟಿಕೆಟ್ ನೀಡಿದರೆ ಪಕ್ಷವನ್ನು ಸಂಘಟಿಸುವುದು ಹೇಗೆ? ಅಲ್ಲದೆ ಕಳೆದ ಹಲವು ಚುನಾವಣೆಗಳಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದವರ ಜೊತೆ ನಾವು ಕೈ ಜೋಡಿಸುವುದಾದರೂ ಹೇಗೆ ಎಂದು ಹರೀಶ್ ಪ್ರಶ್ನಿಸಿದ್ದಾರೆ. ಗೋಪಾಲಯ್ಯ ನಮ್ಮನ್ನು ನಂಬಿಕೊಂಡು ಬಂದಿದ್ದಾರೆ. ಅವರಿಗೆ ವಿಷ ಕೊಡಲು ಸಾಧ್ಯವೇ ಎಂದು ಸಿಎಂ ಬಿಎಸ್‍ವೈ ಹೇಳುತ್ತಾರೆ. ಗೋಪಾಲಯ್ಯಗೆ ವಿಷ ಕೊಡುವುದು ಬೇಡ. 30 ವರ್ಷ ದುಡಿದವರಿಗೇನೇ ಮುಖ್ಯಮಂತ್ರಿಗಳು ವಿಷ ಕೊಟ್ಟುಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಪುರಂನಲ್ಲೂ ಮಾಜಿ ಶಾಸಕ ನಂದೀಶ್ ರೆಡ್ಡಿ ಟಿಕೆಟ್ ಕೈತಪ್ಪಿದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಬೆದರಿಕೆ ಹಾಕಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಬೆಳಗಾವಿಯ ಕಾಗವಾಡದಲ್ಲೂ ಬಂಡಾಯದ ಕಾವು ಜೋರಾಗುತ್ತಿದೆ. ಅನರ್ಹಗೊಂಡಿರುವ ಶ್ರೀಮಂತ ಪಾಟೀಲ್ ಪುತ್ರ ಶ್ರೀನಿವಾಸಗೌಡಗೆ ಬಿಜೆಪಿಯಿಂದ ಟಿಕೆಟ್ ನೀಡಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಮಾಜಿ ಶಾಸಕ ರಾಜು ಕಾಗೆ ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಹಿರೇಕೆರೂರು, ರಾಣೆಬೆನ್ನೂರಿನಲ್ಲೂ ಬಿಜೆಪಿಗೆ ಬಂಡಾಯ ನುಂಗಲಾರದ ತುತ್ತಾಗಿದೆ. ಬಿ.ಸಿ.ಪಾಟೀಲ್‍ಗೆ ಟಿಕೆಟ್ ನೀಡಲು ಮಾಜಿ ಶಾಸಕ ಯು.ಬಿ.ಬಣಕಾರ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.  ಸೋಮವಾರ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುವುದರಿಂದ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವವರು ಬಂಡಾಯ ಸಾರುವ ಮೂಲಕ ವರಿಷ್ಠರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

Facebook Comments