ದೋಸ್ತಿ ಸರ್ಕಾರ ಬೀಳುವುದನ್ನೇ ಕಾಯುತ್ತಿರುವ ಕೇಸರಿ ಪಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.21- ಈವರೆಗೂ ಮಧ್ಯಂತರ ಚುನಾವಣೆಯ ಜಪಾ ಮಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ಸರ್ಕಾರ ರಚನೆ ಮಾಡಲು ಸಿದ್ಧ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಲೋಕಸಭೆ ಮಹಾಸಮರದಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಕಂಡಿರುವ ಬಿಜೆಪಿ ದೋಸ್ತಿ ಸರ್ಕಾರ ಪತನವಾದರೆ ಹೊಸ ಜನಾದೇಶ ಮೂಲಕ ಪೂರ್ಣ ಬಹುಮತ ಪಡೆದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರ ಹಾಕಿಕೊಂಡಿತ್ತು.

ಇದಕ್ಕೆ ಪೂರಕವೆಂಬಂತೆ ಲೋಕಸಮರದಲ್ಲಿ ಬಿಜೆಪಿ ಸರಿಸುಮಾರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದನ್ನು ಆಧಾರವಾಗಿಟ್ಟುಕೊಂಡೇ ಬಿಜೆಪಿ ನಾಯಕರು ಮಧ್ಯಂತರ ಚುನಾವಣೆ ಜಪ ಮಾಡುತ್ತಿದ್ದರು. ಹೇಗಿದ್ದರೂ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಪ್ರಬಲವಾಗಿದೆ.

ಒಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಷತನ ಹಾಗೂ ಯಡಿಯೂರಪ್ಪನವರ ಬೆನ್ನಿಗೆ ನಿಂತ ಲಿಂಗಾಯಿತ ಸಮುದಾಯದ ಪ್ರಭಾವದಿಂದ ಕನಿಷ್ಠ ಪಕ್ಷ 130 ಸ್ಥಾನಗಳನ್ನು ಗೆದ್ದೇಗೆಲ್ಲುತ್ತೇವೆಂಬ ಅಚಲ ವಿಶ್ವಾಸ ಬಿಜೆಪಿ ನಾಯಕರಲ್ಲಿತ್ತು.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಮಧ್ಯಂತರ ಚುನಾವಣೆಗೆ ಸಿದ್ದರಾಗಿ ಎಂಬ ಸಂದೇಶವನ್ನು ರವಾನಿಸಿದ್ದರು. ಕಾಂಗ್ರೆಸ್-ಜೆಡಿಎಸ್ ನಾಯಕರು ಹಾದಿ ಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ. ಚುನಾವಣೆಗೆ ಬೇಕಾದ ಸಿದ್ದತೆಯನ್ನು ಕೈಗೊಳ್ಳಿ ಎಂಬ ಸೂಚನೆ ನೀಡಿದ್ದರು.

ಹೀಗಾಗಿಯೇ ಬಿಜೆಪಿ ನಾಯಕರು ಕಳೆದ ವಾರ ಜಿಂದಾಲ್ ಪ್ರಕರಣ, ಐಎಂಎ ಹಗರಣವನ್ನು ಮುಂದಿಟ್ಟುಕೊಂಡು ಬೀದಿಗಿಳಿದಿದ್ದರು. ಆದರೆ, ಈಗ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಿರುವುದು ಏಕೆ ಎಂಬ ಯಕ್ಷಪ್ರಶ್ನೆ ಮೂಡಿದೆ.

ಶಾಸಕರು ಸಿದ್ದವಿಲ್ಲ:
ವಾಸ್ತವವಾಗಿ ರಾಜ್ಯದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯಡಿಯೂರಪ್ಪನವರಂತಹ ಪ್ರಬಲ ನಾಯಕರ ಬೆಂಬಲ ಇರುವಾಗ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುತ್ತದೆ ಎಂಬ ವಿಶ್ವಾಸ ಕೆಲವರಲ್ಲಿ ಇದೆ. ಆದರೆ, ಅನೇಕ ಶಾಸಕರಿಗೆ ಪುನಃ ಚುನಾವಣೆ ನಡೆದರೆ ಗೆದ್ದು ಬರುತ್ತೇವೆಯೇ ಎಂಬ ಅನುಮಾನ ಕಾಡತೊಡಗಿದೆ.

ಲೋಕಸಭೆ ಚುನಾವಣೆಗೂ, ವಿಧಾನಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ರಾಷ್ಟ್ರೀಯ ವಿಷಯಗಳ ಮೇಲೆ ಮತದಾರರು ಲೋಕಸಮರದಲ್ಲಿ ಮತ ಚಲಾಯಿಸುತ್ತಾರೆ.  ಸ್ಥಳೀಯ ವಿಷಯಗಳು ಮತ್ತು ಆಡಳಿತ ನಡೆಸಿದ ಸರ್ಕಾರ ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತದೆ ಎಂಬುದರ ಮೇಲೆ ಮತದಾರರು ಮುಂದಿನ ಸರ್ಕಾರದ ಹಣೆಬರಹ ತೀರ್ಮಾನಿಸುತ್ತಾರೆ.

ಈ ಬಾರಿಯೂ ಬಿಜೆಪಿಗೆ ಪರಿಸ್ಥಿತಿ ಪೂರಕವಾಗಿದ್ದರೂ ಮತ್ತೆ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದರೆ ಮುಂದೇನು ಎಂಬ ಪ್ರಶ್ನೆಯೂ ಕಾಡುತ್ತಿದೆ. ಅಲ್ಲದೆ, ಸುಮಾರು 25ಕ್ಕೂ ಹೆಚ್ಚು ಶಾಸಕರು ಅತ್ಯಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ.  ಐದು ಸಾವಿರ ಮತಗಳ ಅಂತರದಿಂದ ಗೆದ್ದಿರುವ ಶಾಸಕರಿಗೆ ಮತ್ತೆ ಮತದಾರ ಆಶೀರ್ವಾದ ಮಾಡುತ್ತಾನೋ, ಇಲ್ಲವೆ ಕೈ ಕೊಡುತ್ತಾನೋ ಎಂಬ ಭೀತಿ ಕಾಡುತ್ತಿದೆ.

ಅಲ್ಲದೆ, ಲೋಕಸಭೆ ಚುನಾವಣೆ ಮುಗಿದು ಕೆಲವೇ ದಿನಗಳು ಆಗಿವೆ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಗೆ ಹೋದರೆ ಮತದಾರ ಪ್ರಭು ಮನ್ನಿಸುತ್ತಾನೆಯೇ ಎನ್ನುತ್ತಾರೆ ಕೆಲವು ಬಿಜೆಪಿ ನಾಯಕರು. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ಮಧ್ಯಂತರ ಚುನಾವಣೆ ಬದಲು ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಬೇಕೆಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಈಗಾಗಲೇ ಪಕ್ಷದ ವರಿಷ್ಠರೂ ಕೂಡ ಅನ್ಯ ಪಕ್ಷಗಳಿಂದ ಶಾಸಕರು ಬಂದರೆ ಸರ್ಕಾರ ರಚನೆ ಮಾಡುವ ಬಗ್ಗೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿಯೇ ಬಿಜೆಪಿ ನಾಯಕರು ಮಧ್ಯಂತರ ಚುನಾವಣೆ ಜಪ ಬಿಟ್ಟು ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸಲು ಯೋಗ್ಯತೆ ಇಲ್ಲ ಎಂದರೆ ನಾವು ಆಡಳಿತ ನಡೆಸಲು ಸಿದ್ಧ ಎನ್ನುತ್ತಿದ್ದಾರೆ. ಅದಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

Facebook Comments