ಮೋದಿ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಬಿಜೆಪಿ ಕಚೇರಿಯಲ್ಲಿ ಹೋಮಹವನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 20- ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಕಚೇರಿಯಲ್ಲಿಂದು ವಿಶೇಷವಾದ ಪೂಜೆ ಸಲ್ಲಿಸಲಾಯಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಶಾಸಕರಾದ ಡಾ.ಅಶ್ವಥ್ ನಾರಾಯಣ, ಕಳಸಪ್ಪ ಬಂಡಿ, ದತ್ತಾತ್ರೇಯ ಪಾಟೀಲ್ ರೇವೂರ್, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸೇರಿದಂತೆ ಮತ್ತಿತರ ಪ್ರಮುಖರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗಣಪತಿ ಹೋಮ, ರುದ್ರಯಾಗ, ಚಂಡಿಕಾ ಹೋಮ, ಶತ್ರು ಸಂಹಾರ ಯಾಗ ಸೇರಿದಂತೆ ಹಲವು ಹೋಮಹವನಗಳನ್ನು ನಡೆಸಲಾಯಿತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ವಿಶೇಷ ಪೂಜೆಯ ನೆರವೇರಿಸಿ, ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬರಬೇಕು, ಅದೇ ರೀತಿ ರಾಜ್ಯದಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ರಾಜ್ಯ ಸುಭೀಕ್ಷೆಯಿಂದ ಕೂಡಿರಲಿ ಎಂದು ಪ್ರಾರ್ಥಿಸಲಾಯಿತು.

ದೋಸ್ತಿಗಳು ಮನೆ ಸೇರಲಿದ್ದಾರೆ :  ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ದೋಸ್ತಿ ಪಕ್ಷಗಳ ಘಟಾನುಘಟಿ ನಾಯಕರು ಸೋತು ಮನೆಗೆ ಹೋಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬಂದಿವೆ. ದೇಶದ ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಲು ಕಾತುರರಾಗಿದ್ದಾರೆ ಎಂದರು.300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ಯಾವ ಶಕ್ತಿಗಳು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಕೇಂದ್ರದಲ್ಲಿ ಕಳೆದ ಐದು ವರ್ಷ ಎನ್‍ಡಿಎ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಿದೆ. ದೇಶವನ್ನು ಮುನ್ನಡೆಸಲು ಮೋದಿಯಂತಹ ಸಮರ್ಥ ನಾಯಕ ಅಗತ್ಯ ಎಂಬುದು ಮತದಾರರಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ದೃಢ ನಿಶ್ಚಯದಿಂದ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ