ಬಿಜೆಪಿ ಮಹಿಳಾ ಸಂಸದರ ಜತೆ ಪ್ರಧಾನಿ ಮೋದಿ ಉಪಹಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.12- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬಿಜೆಪಿ ಮಹಿಳಾ ಸಂಸದರೊಂದಿಗೆ ಉಪಹಾರ ಕೂಟದಲ್ಲಿ ಪಾಲ್ಗೊಂಡರು. ತಮ್ಮ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಮತ್ತು ಮುಂದುವರಿಸಬೇಕಾದ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಬಗ್ಗೆ ಮಹಿಳಾ ಸಂಸದರಿಗೆ ಮೋದಿ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ 41 ಮಹಿಳಾ ಸಂಸದರು ಈ ಉಪಹಾರ ಕೂಟದಲ್ಲಿ ಪಾಲ್ಗೊಂಡು ಮೋದಿ ಅವರಿಂದ ಮಹತ್ವದ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಷಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಈ ಸಭೆಯಲ್ಲಿ ಹಾಜರಿದ್ದರು.

ಮೋದಿ ಪ್ರತೀ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಎಲ್ಲ ಸಂಸದರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಮೋದಿ ಅವರ ಐದನೆ ಸಭೆ. ಈ ಹಿಂದೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂಸದರನ್ನು ಭೇಟಿ ಮಾಡಿದ್ದರು.

16ನೆ ಲೋಕಸಭೆಯಲ್ಲೂ ಕೂಡ ಮೋದಿ ಅವರು ಸಂಸತ್ ಅಧಿವೇಶನದ ಸಂದರ್ಭದಲ್ಲಿ ದೇಶದ ಸಂಸದರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.  17ನೆ ಲೋಕಸಭೆಯಲ್ಲಿ 41 ಬಿಜೆಪಿ ಮಹಿಳಾ ಸಂಸದರು ಸೇರಿದಂತೆ ಒಟ್ಟು 78 ವನಿತೆಯರು ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದಾರೆ.

Facebook Comments