ಸಹಕಾರಿ ಧುರೀಣ ಬಿ.ಎಲ್.ಲಕ್ಕೇಗೌಡ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಭಾರತ್ ಎಜುಕೇಷನ್ ಸೊಸೈಟಿಯ ಸಂಸ್ಥಾಪಕರು , ನಿವೃತ್ತ ಜಿಲ್ಲಾಧಿಕಾರಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಬಿ.ಎಲ್. ಲಕ್ಕೇಗೌಡ (88) ಅವರು ನಿಧನರಾಗಿದ್ದಾರೆ. ಕಳೆದ ಎರಡು-ಮೂರು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಪುತ್ರಿ ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಜಯನಗರದ 8ನೆ ಬ್ಲಾಕ್‍ನಲ್ಲಿರುವ ಅವರ ಸ್ವಗೃಹದಲ್ಲಿ ಮಧ್ಯಾಹ್ನದವರೆಗೂ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ಗಣ್ಯರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ನಂತರ ಬಿಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೆಲ ಕಾಲ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಬೆಳಗವಾಡಿಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯ ಲಾಯಿತು. ಅವರ ಸ್ವಗ್ರಾಮ ಬೆಳಗವಾಡಿಯ ತೋಟದಲ್ಲಿ ಇಂದು ಸಂಜೆ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ ಎಂದು ಆಪ್ತ ವಲಯದ ಮೂಲಗಳು ತಿಳಿಸಿವೆ. ಕೃಷಿಕ ಕುಟುಂಬದವರಾದ ಅವರು ಬಿಎ, ಬಿಎಲ್ ಪದವೀಧರ ರಾಗಿದ್ದು, 1957ರಿಂದ 1962ರವರೆಗೆ ವಕೀಲರಾಗಿ ಸೇವೆ ಸಲ್ಲಿಸಿದರು.

1962ರಲ್ಲಿ ತಹಸೀಲ್ದಾರರಾಗಿ ಕರ್ನಾಟಕ ಆಡಳಿತ ಸೇವೆಗೆ ಪಾದಾರ್ಪಣೆ ಮಾಡಿದ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮಂಡ್ಯ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ದಿ ಭಾರತ್ ವಿದ್ಯಾ ಸಂಸ್ಥೆ , ದಿ ಭಾರತ್ ಗೃಹ ನಿರ್ಮಾಣ ಸಹಕಾರ ಸಂಘ, ಭಾರತ್ ಕೋ ಆಪರೇಟಿವ್ ಬ್ಯಾಂಕ್, ದಿ ಭಾರತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ, ಬೆಂಗಳೂರು ಜಿಲ್ಲೆಗಳ ಪದವೀಧರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ , ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಕೇಂದ್ರ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.

ವಿವಿಧ ಸಂಸ್ಥೆಗಳ ಮೂಲಕ ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು. ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಶ್ರೇಷ್ಠ ಸಾಮಾಜಿಕ ಕಾರ್ಯಕರ್ತರ ಪ್ರಶಸ್ತಿ , ಸಹಕಾರ ಶಿಲ್ಪಿ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ , ಕುವೆಂಪು ಕನ್ನಡ ರತ್ನ ಶ್ರೀ ಪ್ರಶಸ್ತಿ, ಕರ್ನಾಟಕ ಸುಪುತ್ರ , ಸಹಕಾರ ರತ್ನ , ರಾಷ್ಟ್ರೀಯ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಸಂತಾಪ: ಸಹಕಾರ ಧುರೀಣ, ಬಿಇಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಬಿ.ಎಲ್.ಲಕ್ಕೇಗೌಡ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಬಿ.ಎಲ್.ಲಕ್ಕೇಗೌಡ ಅವರು ನಿಧನರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ ಎಂದಿರುವ ದೇವೇಗೌಡರು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಜನಸೇವೆಯನ್ನೇ ದೈವವೆಂದು ಭಾವಿಸಿ ತಮ್ಮ ಇಡೀ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟ ಲಕ್ಕೇಗೌಡರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿಸಕ್ರಿಯರಾಗಿದ್ದ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯ. ಅವರ ಅಗಲಿಕೆಯಿಂದ ಬಹು ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

Facebook Comments