ಬಿ.ಎಲ್.ಸಂತೋಷ್ ವಿರುದ್ಧ ಜಮೀರ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸುಳ್ಳು ಪ್ರಚಾರ ಬಿಟ್ಟು, ಗಲಭೆ ಪೀಡಿತ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರದೇಶಗಳಲ್ಲಿ ಶಾಂತಿ ನೆಲೆಸಲು ಸಹಕಾರ ನೀಡಬೇಕು ಎಂದು ಕಾಂಗ್ರೆಸ್‍ನ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮನವಿ ಮಾಡಿದ್ದಾರೆ.

ಸರಣಿ ಟ್ವಿಟ್‍ಗಳ ಮೂಲಕ ಬಿ.ಎಲ್.ಸಂತೋಷ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಜಮೀರ್, ರಾಜ್ಯದ 224 ಶಾಸಕರಿಗೂ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರಗಳಿವೆ, ಪೊಲೀಸ್ ಇಲಾಖೆ ನಿಮ್ಮ ಅೀನದಲ್ಲಿದೆ. ನಿಮ್ಮ ವೈಫಲ್ಯಕ್ಕೆ ಬೇರೆಯವರನ್ನು ಪ್ರಶ್ನಿಸಿದರೆ ಹೇಗೆ ಸ್ವಾಮಿ ? ಎಂದು ಪ್ರಶ್ನಿಸಿದ್ದಾರೆ.

ಅಖಂಡ ಶ್ರೀನಿವಾಸ ಮೂರ್ತಿಯವರು ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ರಕ್ಷಣೆ ನೀಡುತ್ತಿಲ್ಲ ಎಂದು ಸಂತೋಷ್ ಅವರು ಮಾಡಿರುವ ಆರೋಪ ಕೇವಲ ರಾಜಕೀಯ ಲಾಭಕ್ಕಷ್ಟೇ ಸೀಮಿತ. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಸೋದರತೆ, ಸಮಾನತೆ ಸಾರುವ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವವರು ನೀವೇ ಅಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ದಲಿತರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳುವುದು ಒಳಿತು. ಕಾಂಗ್ರೆಸ್ ಪಕ್ಷ ಎಂದಿಗೂ ಧರ್ಮಾಧಾರಿತ, ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ ಎಂದಿದ್ದಾರೆ.

ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ, ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಆಡಳಿತದಲ್ಲಿರುವ ನಿಮ್ಮ ಪಕ್ಷದ ಕೆಲಸ. ಶಾಂತಿ ಸ್ಥಾಪನೆಗಾಗಿ ನಾನು ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ಇನ್ನಾದರೂ ನಿಮ್ಮ ರಾಜಕೀಯ ಲಾಭ – ನಷ್ಟದ ಲೆಕ್ಕಾಚಾರ ಬದಿಗಿಟ್ಟು, ನಮ್ಮೊಂದಿಗೆ ಶಾಂತಿ ಪ್ರಯತ್ನಕ್ಕೆ ಕೈ ಜೊಡಿಸಿ ಎಂದು ಜಮೀರ್ ಅಹಮದ್ ಸಲಹೆ ನೀಡಿದ್ದಾರೆ.

ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕ ತೋರಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ.

ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ ಎಂದು ಸಮುದಾಯಕ್ಕೆ ತಿಳಿಸಿದ್ದಾರೆ.

Facebook Comments

Sri Raghav

Admin