ಕಪ್ಪು ಹಣ ನಿಯಂತ್ರಣ ಕಾನೂನು ಪೂರ್ವಾನ್ವಯಕ್ಕೆ  ಸುಪ್ರೀಂ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 21-ಕಪ್ಪು ಹಣ ನಿಯಂತ್ರಣ ಕಾನೂನು ಪೂರ್ವಾನ್ವಯಕ್ಕೆ ಅವಕಾಶ ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಈ ಮೂಲಕ 2015ರಿಂದಲೂ ಇದು ಜಾರಿಯಲ್ಲಿರುತ್ತದೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಪ್ಪುಹಣ ದಂಧೆಯಲ್ಲಿ ಶಾಮೀಲಾದವರ ವಿರುದ್ಧ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲು 2015ರ ಜುಲೈನಿಂದಲೇ ಪೂರ್ವಾನ್ವಯವಾಗುವಂತೆ 2016ರ ಕಪ್ಪು ಹಣ ನಿಯಂತ್ರಣ ಕಾನೂನನ್ನು ಜಾರಿಗೊಳಿಸಲು ಅವಕಾಶ ಇಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.

ಬ್ಲಾಕ್ ಮನಿ ಪ್ರಕರಣ ದಾಖಲಾಗಿದ್ದ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿ ಗೌತಮ್ ಖೈತಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್‍ನ ಈ ಆದೇಶದಿಂದ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳಿಗೆ ಅಡ್ಡಿಯಾಗಿತ್ತು.

ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ರಜೆ ಕಾಲದ ಫೀಠವು ದೆಹಲಿ ಹೈಕೋರ್ಟ್‍ನ ಮೇ 16ರ ಆದೇಶಕ್ಕೆ ತಡೆ ನೀಡಿದೆ.

ದೆಹಲಿ ಹೈಕೋರ್ಟ್‍ನ ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದ ಸುಪ್ರೀಂ ಕೋರ್ಟ್, ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಸಮ್ಮತಿ ನೀಡಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ