ಏರಿಯಾದಲ್ಲಿ ಹವಾ ಇಡಲು ಕಾರುಗಳಿಗೆ ಕಲ್ಲೆಸೆದಿದ್ದ ಪುಂಡರು ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.8-ದರೋಡೆಗೆ ಸಂಚುರೂಪಿಸುತ್ತಾ ಏರಿಯಾದಲ್ಲಿ ತಮ್ಮದೇ ಹವಾ ಸೃಷ್ಟಿಸಿ ಹೆಸರು ಮಾಡುವ ಉದ್ದೇಶದಿಂದ ರಾತ್ರಿ ವೇಳೆ ಬೈಕ್‍ನಲ್ಲಿ ಸುತ್ತಾಡಿ ಸುಮಾರು 21 ಕಾರಿನ
ಗ್ಲಾಸ್‍ಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದ ಏಳು ಮಂದಿ ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಂಚಶೀಲನಗರದ ಯಶವಂತ್ (20), ದರ್ಶನ್ (19), ನಿತೀನ್ (18), ಕನಕನಗರದ ಕಿರಣ್‍ರೆಡ್ಡಿ (26), ಮುತ್ತು (22), ಚರಣ್‍ರಾಜ್ (20) ಮತ್ತು ಬಾಲಾಜಿ (45) ಬಂಧಿತರು. ಬುಧವಾರ ಬೆಳಗಿನ ಜಾವ 1.30ರ ಸುಮಾರಿನಲ್ಲಿ ವಿಜಯನಗರ ವ್ಯಾಪ್ತಿಯ ಪಟ್ಟೆಗಾರಪಾಳ್ಯ, ಸಂಪಿಗೆ ಬಡಾವಣೆ ರಸ್ತೆಗಳ ಬದಿಯಲ್ಲಿ ಹಾಗೂ ಮನೆಗಳ ಮುಂದೆ ನಿಲ್ಲಿಸಿದ್ದ ಸುಮಾರು 17 ಕಾರುಗಳಿಗೆ ಕಲ್ಲು ತೂರಿ ಗ್ಲಾಸ್‍ಗಳನ್ನು ಜಖಂಗೊಳಿಸಿ ಕಿಡಿಗೇಡಿಗಳು ಪರಾರಿಯಾಗಿದ್ದರು.

ಈ ಸಂಬಂಧ ಕಾರು ಮಾಲೀಕರು ವಿಜಯನಗರ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಕೂಡ ನಾಲ್ಕು ಕಾರಿನ ಗಾಜುಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯ ಫುಟೇಜ್ ಪಡೆದುಕೊಂಡು ದೃಶ್ಯಾವಳಿಯನ್ನು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಯಶವಂತ್, ದರ್ಶನ್ ಮತ್ತು ನಿತಿನ್‍ನನ್ನು ಬಂಧಿಸಿದ್ದಾರೆ.

ಈ ಮೂವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ನೀಡಿದ ಹೇಳಿಕೆ ಮೇರೆಗೆ ಇನ್ನುಳಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಬಾಗಿಯಾಗಿರುವ ಇನ್ನೂ ಹಲವರ ಪತ್ತೆಗೆ ತನಿಖೆ ಮುಂದುವರೆದಿದೆ.ವಿಜಯನಗರ ಉಪವಿಭಾಗದ ಎಸಿಪಿ ಧರ್ಮೇಂದ್ರ ಅವರ ಮಾರ್ಗದರ್ಶನ ಇನ್ಸ್‍ಪೆಕ್ಟರ್ ಭರತ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.  

Facebook Comments