ಬಿಜೆಪಿ ಮುಖಂಡರ ವಾಹನಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳಿಗೆ ಗುಂಡೇಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12- ಹಣಕ್ಕಾಗಿ ರಾಜಕೀಯ ಮುಖಂಡ, ಉದ್ಯಮಿಯ ಮನೆಯ ವಾಹನಗಳಿಗೆ ಬೆಂಕಿ ಹಚ್ಚಿ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.  ತಮಿಳುನಾಡು ಮೂಲದ ಭಸಿತ್ ಮತ್ತು ರಿಯಾಜ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಗಳು.

ತಮಿಳುನಾಡಿನಿಂದ ಕೆಲಸ ಅರಸಿಕೊಂಡು ಒಬ್ಬಾತ ಒಂದೂವರೆ ವರ್ಷದ ಹಿಂದೆ, ಮತ್ತೊಬ್ಬ ಒಂದೂವರೆ ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದರು.  ಇವರಿಬ್ಬರು ಅಕ್ಕಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ವಾಟರ್‍ಪ್ಲಾಂಟ್ ಮಾಲೀಕ, ಬಿಜೆಪಿ ಮುಖಂಡ ಬಿ.ಟಿ.ಶ್ರೀನಿವಾಸ್ ಅವರ ಮಗ ಶರತ್ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದುದನ್ನು ಆರೋಪಿಗಳು ಗಮನಿಸಿದ್ದರು.

ಇವರಿಬ್ಬರೂ ಊರಿಗೆ ಹಣ ಕಳಿಸಬೇಕಾಗಿತ್ತು. ಹಣದ ಅವಶ್ಯಕತೆ ತೀರಾ ಇದ್ದುದರಿಂದ ಹೇಗಾದರೂ ಮಾಡಿ ಶರತ್ ಅವರನ್ನು ಕಿಡ್ನಾಪ್ ಮಾಡಿ ಹಣ ಪಡೆಯಬಹುದೆಂದು ಸಂಚು ರೂಪಿಸಿ ಅದರಂತೆ ಎರಡು ಬಾರಿ ವಿಫಲ ಯತ್ನವನ್ನೂ ನಡೆಸಿದ್ದರು. ಈ ಸಂಚು ಸಫಲವಾಗದಿದ್ದಾಗ ಶರತ್ ಅವರ ಮೊಬೈಲ್‍ಗೆ ಕರೆ ಮಾಡಿ ನಮಗೆ 50 ಲಕ್ಷ ಹಣ ಕೊಡದಿದ್ದರೆ ನಿಮ್ಮನ್ನು ಕಿಡ್ನಾಪ್ ಮಾಡುತ್ತೇವೆ. ನಿಮ್ಮ ವಾಹನಗಳಿಗೆ ಬೆಂಕಿ ಹಚ್ಚುತ್ತೇವೆಂದು ತಿಳಿಸಿದ್ದಾರೆ.

ಈ ಕರೆಗಳನ್ನು ಸ್ನೇಹಿತರೇ ತಮಾಷೆಗಾಗಿ ಮಾಡಿರಬಹುದೆಂದು ಶರತ್ ಅವರು ನಿರ್ಲಕ್ಷ್ಯ ಮಾಡಿದ್ದರು. ಆರೋಪಿಗಳು ಇಷ್ಟಕ್ಕೇ ಸುಮ್ಮನಾಗದೆ ಇಂದು ಮುಂಜಾನೆ 1.30ರ ಸುಮಾರಿನಲ್ಲಿ ಟಿ.ದಾಸರಹಳ್ಳಿಯ 4ನೆ ಕ್ರಾಸ್, ನೀಲಮಹೇಶ್ವರಿ ರಸ್ತೆಯಲ್ಲಿರುವ ವಾಟರ್ ಪ್ಲಾಂಟ್ ಮಾಲೀಕ ಬಿ.ಟಿ.ಶ್ರೀನಿವಾಸ್ ಅವರ ಮನೆ ಬಳಿ ಹೋಗಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಎರಡು ಡಿಯೋ ಬೈಕ್, ಜ್ಯುಪಿಟರ್ ಬೈಕ್ ಮತ್ತು ಸ್ಪ್ಲೆಂಡರ್ ಬೈಕ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಕೆಲ ಸಮಯದ ಬಳಿಕ ಬೈಕ್‍ಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಶ್ರೀನಿವಾಸ್ ಕುಟುಂಬದವರು, ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿ ಬಗಲಗುಂಟೆ ಪೊಲೀಸರಿಗೆ ವಿಷಯ ತಿಳಿಸಿದರು.  ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಗಲಗುಂಟೆ ಪೊಲೀಸರು ಬೆಂಕಿ ಹಚ್ಚಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದರು.

ಉತ್ತರ ವಿಭಾಗದ ಡಿಸಿಪಿ ಅವರು ಆರೋಪಿಗಳ ಬಂಧನಕ್ಕೆ ಸೋಲದೇವನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಶಿವಸ್ವಾಮಿ ಮತ್ತು ಬಗಲಗುಂಟೆ ಸಿಬ್ಬಂದಿಯನ್ನೊಳಗೊಂಡ ತಂಡವೊಂದನ್ನು ರಚಿಸಿದ್ದರು.  ಅತ್ತ ವಾಹನಗಳಿಗೆ ಬೆಂಕಿ ಹಚ್ಚಿದ ಕೆಲವೇ ಗಂಟೆಗಳಲ್ಲಿ ಶರತ್ ಅವರಿಗೆ ಮತ್ತೆ ಕರೆ ಮಾಡಿದ ಆರೋಪಿಗಳು, ಇದು ಸ್ಯಾಂಪಲ್ ಅಷ್ಟೇ ಹಣ ಕೊಡದಿದ್ದರೆ ನಿಮ್ಮ ಕಚೇರಿ ಮತ್ತು ಕಾರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.

ಶರತ್ ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಎಲ್ಲಾ ಕಡೆ ಬಂದೋಬಸ್ತ್ ಮಾಡಿ ಆರೋಪಿಗಳ ಬಂಧನಕ್ಕೆ ನಾಕಾಬಂದಿ ಮಾಡಿದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೋಲದೇವನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಶಿವಸ್ವಾಮಿ ಅವರು ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಮತ್ತು ಶ್ರೀನಿವಾಸ್ ಅವರೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದರು.

ಈ ನಡುವೆ ಆರೋಪಿಗಳಿಬ್ಬರು ತನ್ನ ಸ್ನೇಹಿತನನ್ನು ಆಚಾರ್ಯ ಕಾಲೇಜು ಬಳಿ ಬರಲು ತಿಳಿಸಿ ಅಲ್ಲೇ ಕಾಯುತ್ತಿದ್ದರು. ಪೊಲೀಸರಿಗೆ ಈ ಮಾಹಿತಿ ಲಭಿಸಿದೆ. ತಕ್ಷಣ ಸಿಬ್ಬಂದಿಗಳೊಂದಿಗೆ ಶಿವಸ್ವಾಮಿ ಅವರು ಆಚಾರ್ಯ ಕಾಲೇಜು ಬಳಿ ಹೋಗಿ ಆರೋಪಿಗಳನ್ನು ಹಿಡಿಯಲು ಮುಂದಾದಾಗ ಅವರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ತಕ್ಷಣ ಶಿವಸ್ವಾಮಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗಳಿಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ. ಇನ್ಸ್‍ಪೆಕ್ಟರ್ ಅವರ ಮಾತನ್ನು ಲೆಕ್ಕಿಸದೆ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡುಗಳು ಆರೋಪಿಗಳಿಬ್ಬರ ಕಾಲುಗಳಿಗೆ ತಗುಲಿ ಕುಸಿದುಬಿದ್ದಿದ್ದಾರೆ.  ತಕ್ಷಣ ಆರೋಪಿಗಳನ್ನು ಸುತ್ತುವರಿದು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Facebook Comments