ನಕಲಿ ದಾಖಲೆ ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ನಾಲ್ವರು ವಂಚಕರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.14- ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಿಗೆ ಅಸಲಿ ದಾಖಲೆಗಳೆಂದು ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಜಾಲವೊಂದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಹೆಸರಘಟ್ಟದ ಕುಂಬಾರ ಬೀದಿ ನಿವಾಸಿ ಮಧುಕುಮಾರ್ (37), ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನರಸಿಂಹಮೂರ್ತಿ (27), ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ರತ್ನಮ್ಮ (46) ಮತ್ತು ರಮಾದೇವಿ (40) ಬಂಧಿತ ವಂಚಕರು.

ಈ ನಾಲ್ವರು ಇದುವರೆಗೂ ಸುಮಾರು 200 ಮಂದಿ ಆರೋಪಿಗಳಿಗೆ ನಕಲಿ ಭೂ ದಾಖಲೆಗಳ ಆಧಾರದಲ್ಲಿ ಅಸಲಿ ಭೂ ಮಾಲೀಕರೆಂದು ಘೋಷಣಾ ಪತ್ರವನ್ನು ನ್ಯಾಯಾಲಯಗಳಿಗೆ ಸಲ್ಲಿಸಿ ಜಾಮೀನು ಪಡೆದ ನಂತರ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ನಗರದ ವಿವಿಧ ನ್ಯಾಯಾಲಯಗಳಲ್ಲಿ ಜಾಮೀನು ಪಡೆದಿದ್ದ ಬಹಳಷ್ಟು ಮಂದಿ ಆರೋಪಿಗಳು ಜಾಮೀನು ಪಡೆದ ನಂತರ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗುತ್ತಿದ್ದರು. ಅವರಿಗೆ ಸಮನ್ಸ್, ವಾರೆಂಟ್ ಜಾರಿಯಾಗದೆ ಉಳಿಯುತ್ತಿದ್ದುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ನಿಟ್ಟಿನಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ ವ್ಯಕ್ತಿಗಳ ಪತ್ತೆಗೆ ಮತ್ತು ಜಾಮೀನುದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲಾತಿಗಳನ್ನು ನೀಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ನಕಲಿ ದಾಖಲೆ ನೀಡಿ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸುತ್ತಿದ್ದ ವ್ಯಕ್ತಿಗಳ ಪತ್ತೆಗೆ ಹಾಗೂ ಸಮನ್ಸ್ ಪ್ರಗತಿಯ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಉಸ್ತುವಾರಿಯಲ್ಲಿ ಡಿಸಿಪಿ ಕುಲ್‍ದೀಪ್‍ಕುಮಾರ್ ಜೈನ್ ಮಾರ್ಗದರ್ಶನದಲ್ಲಿ ಎಸಿಪಿ ವೇಣುಗೋಪಾಲ್, ಇನ್ಸ್‍ಪೆಕ್ಟರ್ ಅಜರೇಶ್ ಸಿಬ್ಬಂದಿಗಳ ತಂಡ ರಚಿಸಿದ್ದರು.

ಈ ತಂಡ ಹಲವು ಮಾಹಿತಿಗಳನ್ನು ಕಲೆ ಹಾಕಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದುವರೆಗೂ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಆರೋಪಿಗಳ ಜಾಮೀನು ರದ್ದುಪಡಿಸಲು ಸಂಬಂಧಪಟ್ಟ ನ್ಯಾಯಾಲಯಗಳಿಗೆ ವರದಿ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ.

Facebook Comments