ಬೆಂಗಳೂರಲ್ಲಿ ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.15 – ನಿವೃತ್ತ ಬಿಇಎಂಎಲ್ ಉದ್ಯೋಗಿಯೊಬ್ಬರು ಪತ್ನಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮಂಜುನಾಥನಗರದ ಪಾರ್ಕ್ ಸಮೀಪದ ನಿವಾಸಿ ಮೋಹನ್(60) ಮತ್ತು ನಿರ್ಮಲ(55) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ.

ಮೋಹನ್ ದಂಪತಿ ವಾಸವಾಗಿದ್ದ ಮನೆ ಸಮೀಪವೇ ಮಗ-ಸೊಸೆ ಕೆಲ ದಿನಗಳಿಂದ ಬೇರೆ ಮನೆಯಲ್ಲಿ ನೆಲೆಸಿದ್ದರು. ಈ ನಡುವೆ ರಾತ್ರಿ ಮೋಹನ್ ದಂಪತಿ ಆತ್ಮಹತ್ಯೆಗೆ ನಿರ್ಧರಿಸಿ ಊಟ ಮಾಡಿ ವಿಷ ಸೇವಿಸಿ ಮಲಗಿದ್ದಾರೆ…ಇಂದು ಬೆಳಗ್ಗೆ ಮಗ ಮನೆಗೆ ಬಂದು ಕಾಲಿಂಗ್ ಬೆಲ್ ಮಾಡಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ಅಲ್ಲದೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರಿಂದ ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ಅಪ್ಪ-ಅಮ್ಮ ಸಾವನ್ನಪ್ಪಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಬಸವೇಶ್ವರನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಮೋಹನ್ ಮತ್ತು ಅವರ ಪತ್ನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ರಮೇಶ್ ಈ ಸಂಜೆಗೆ ತಿಳಿಸಿದ್ದಾರೆ.  ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Facebook Comments