ಕೆಪಿ ಅಗ್ರಹಾರ-ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆ, 60.95 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 14-ಪಶ್ಚಿಮ ವಿಭಾಗದ ಕೆಪಿ ಅಗ್ರಹಾರ ಹಾಗೂ ಉಪ್ಪಾರಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 14 ಮಂದಿ ಆರೋಪಿಗಳನ್ನು ಬಂಧಿಸಿ 34 ಪ್ರಕರಣಗಳನ್ನು ಪತ್ತೆಹಚ್ಚಿ 60.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು 3.65 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಪಿ.ಅಗ್ರಹಾರ : ನಗರದಲ್ಲಿ ಐಷರಾಮಿ ಜೀವನ ನಡೆಸಲು ಬೀಗ ಹಾಕಿರುವ ಮನೆಗಳನ್ನು ಹಗಲು ವೇಳೆ ಗುರುತಿಸಿ ಕಳ್ಳತನ ಮಾಡುತ್ತಿದ್ದ ಮೂವರನ್ನು ಕೆಪಿ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ 3ನೇ ಹಂತದ ಗೋಪಿ(43), ಬಿಳೇಕಳ್ಳಿಯ ರಾಜ(40) ಮತ್ತು ಮಾಗಡಿ ರಸ್ತೆಯ ಡೇವಿಡ್(34) ಬಂಧಿತ ಆರೋಪಿ ಗಳಾಗಿದ್ದು, ಇವರಿಂದ 35 ಲಕ್ಷ ರೂ. ಬೆಲೆ ಬಾಳುವ 1 ಕೆಜಿ 119 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ ಬೈಕ್‍ನ್ನು ವಶಪಡಿಸಿ ಕೊಂಡಿದ್ದಾರೆ.

ಮರಿಯಪ್ಪನ ಪಾಳ್ಯದ 10ನೇ ಮುಖ್ಯರಸ್ತೆ, ಕೆಪಿ ಅಗ್ರಹಾರದ ನಿವಾಸಿ ವೆಂಕಟೇಶ್ ಎಂಬುವರ ಮನೆಯ ಬೀಗ ಒಡೆದು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಮಾಗಡಿರಸ್ತೆ, ಶೇಷಾದ್ರಿಪುರಂ, ಅನ್ನಪೂರ್ಣೇಶ್ವರಿ ನಗರ, ಅನಗೊಂಡನಹಳ್ಳಿ, ಕೋರಮಂಗಲ, ಮಾಲೂರು, ಚಾಮರಾಜಪೇಟೆ, ವಿಜಯನಗರ, ಜೆಜೆನಗರ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿ ರಾಜ ಕುಖ್ಯಾತ ಕನ್ನಗಳವು ಆರೋಪಿಯಾಗಿದ್ದು, ಈತನಿಗೆ ಇಬ್ಬರು ಪತ್ನಿಯರು. ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ತನ್ನ ಛಾಳಿ ಮುಂದುವರೆಸಿದ್ದ ಈತ ಕಳವು ಮಾಡುತ್ತಿದ್ದ ಚಿನ್ನಾಭರಣವನ್ನು ಹೆಂಡತಿಯರ ಮುಖಾಂತರ ವಿಲೇವಾರಿ ಮಾಡಿಸುತ್ತಿದ್ದನು.

ಸಹೋದರರ ಬಂಧನ: ಮತ್ತೊಂದು ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಳ್ಳತನ ಮಾಡಿದ್ದ ಸಹೋದರರಿಬ್ಬರನ್ನು ಕೆಪಿಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 7.20 ಲಕ್ಷ ರೂ. ಬೆಲೆ ಬಾಳುವ 17 ಕೆಜಿ 700 ಗ್ರಾಂ ತೂಕದ ಅರಗು ಮಿಶ್ರಿತ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜುನಾಥ್ ನಗರದ ಶ್ರೀಧರ್(38) ಮತ್ತು ಸೆಂದಿಲ್‍ಕುಮಾರ್(42) ಬಂಧಿತು. ಮಂಜುನಾಥನಗರದಲ್ಲಿ ಸಿಲ್ವರ್ ಟೆಸ್ಟಿಂಗ್‍ಲ್ಯಾಬ್ ಅಂಡ್ ವಕ್ರ್ಸ್ ಎಂಬ ಅಂಗಡಿಯಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ಮಾಲೀಕ ಅಶೋಕ್ ಕುಮಾರ್ ಅವರು ದೂರು ನೀಡಿದ್ದರು. ದೂರಿನನ್ವಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉಪ್ಪಾರಪೇಟೆ: ಬಿಎಂಟಿಸಿ ಬಸ್‍ಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಪ್ರಯಾಣಿಕರಂತೆ ವರ್ತಿಸಿ ಜನಜಂಗುಳಿ ವೇಳೆ ಪ್ರಯಾಣಿಕರ ಬ್ಯಾಗ್‍ಗಳಿಂದ ಪರ್ಸ್‍ಗಳನ್ನು ಕದಿಯುತ್ತಿದ್ದ ಇಬ್ಬರನ್ನು ಉಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 15.10 ಲಕ್ಷ ರೂ. ಬೆಲೆಬಾಳುವ 503 ಗ್ರಾಂ ತೂಕದ ಚಿನ್ನಾಭರಣ ಮತ್ತು 100 ಗ್ರಾಂ ತೂಕದ ಬೆಳ್ಳಿಯ ಕಾಲ್ಬೈನುಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕನ್ನಗಳವು ಮತ್ತು ಮನೆಗಳವು ಮಾಡುತ್ತಿದ್ದ ಆರೋಪಿಗಳಾದ ವಿಶ್ವನಾಥ(23), ಜಬೀವುಲ್ಲಾ(29), ಶ್ರೀನಿವಾಸ(34) ಮತ್ತು ಕುಮಾರ(34)ನನ್ನುಬಂಧಿಸಿ 1.82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮೂವರು ಆರೋಪಿಗಳನ್ನುಉಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 1.83 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಹರೀಶ(29),ರಾಘವೇಂದ್ರ(29),ಅಸ್ಲಾಂ ಪಾಷ(39)ಎಂಬುವರನ್ನು ಬಂಧಿಸಿ ಸಾಮಾನ್ಯ ಕಳವು ಪ್ರಕರಣಗಳಲ್ಲಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮತ್ತು ಅಪರ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ರವಿ.ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಕೆಪಿ ಅಗ್ರಹಾರ ಠಾಣೆ ಇನ್‍ಸ್ಪೆಕ್ಟರ್ ಶಿವಪ್ರಸಾದ್,ಉಪ್ಪಾರಪೇಟೆ ಠಾಣೆ ಇನ್‍ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ನಡೆಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ