ಪಾರ್ಟಿ ವೇಳೆ ಶುರುವಾದ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ಪಾರ್ಟಿ ಮಾಡುವ ವೇಳೆ ಹಣಕಾಸು ವಿಚಾರದಲ್ಲಿ ಉಂಟಾದ ಜಗಳದಲ್ಲಿ ಇಬ್ಬರು ಸ್ನೇಹಿತರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮೂಲತಃ ತಮಿಳುನಾಡಿನ ಸುಬ್ರಮಣಿ (34) ಮತ್ತು ಸಂತೋಷ್ ಅಲಿಯಾಸ್ ಪಿಳ್ಳೈ(38) ಕೊಲೆಯಾದವರು. ಸುಬ್ರಮಣಿ, ಸಂತೋಷ್ ಹಾಗೂ ಮತ್ತಿಬ್ಬರು ಸ್ನೇಹಿತರು ಪೇಂಟಿಂಗ್ ವೃತ್ತಿ ಮಾಡುತ್ತಿದ್ದರು.

ನಿನ್ನೆ ಭಾನುವಾರವಾದ್ದರಿಂದ ಈ ನಾಲ್ಕು ಮಂದಿ ಒಟ್ಟಿಗೆ ಪಾರ್ಟಿ ಮಾಡಲು ತಲಘಟ್ಟಪುರ ವ್ಯಾಪ್ತಿಯ ಭುವನೇಶ್ವರಿನಗರದ ಶನಿಮಹಾತ್ಮ ದೇವಸ್ಥಾನ ಹಿಂಭಾಗದ ಖಾಲಿ ಜಮೀನಿನ ಬಳಿ ಸಂಜೆ 6 ಗಂಟೆ ಸಮಯದಲ್ಲಿ ಹೋಗಿದ್ದಾರೆ. ನಾಲ್ವರು ಒಟ್ಟಾಗಿ ಮಾತನಾಡುತ್ತಾ ಪಾರ್ಟಿ ಮಾಡುತ್ತಿದ್ದಾಗ ನಶೆ ವೇಳೆ ಹಣಕಾಸು ವಿಚಾರವಾಗಿ ಇವರ ಮಧ್ಯೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಜಗಳವಾಗಿದೆ.

ಜಗಳ ವಿಕೋಪಕ್ಕೆ ಹೋದಾಗ ಸುಬ್ರಮಣಿ ಹಾಲೋಬ್ರಿಕ್ಸ್‍ನಿಂದ ಸಂತೋಷ್‍ಗೆ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಇನ್ನಿಬ್ಬರು ಸ್ನೇಹಿತರು ಸೇರಿ ಸುಬ್ರಮಣಿ ಮೇಲೂ ಹಾಲೋಬ್ರಿಕ್ಸ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಸುಬ್ರಮಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಸಂತೋಷ್ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಎಸಿಪಿ ಮಹದೇವ್, ತಲಘಟ್ಟಪುರ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Facebook Comments