ತಾಯಿ-ಮಗಳನ್ನು ಕೂಡಹಾಕಿ ಮನೆ ಮಾಲೀಕನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ರೋಚಕ ಟ್ವಿಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ,ಡಿ.2- ತಾಯಿ-ಮಗಳನ್ನು ಕೂಡಹಾಕಿ ಮನೆ ಮಾಲೀಕನನ್ನು ಕೊಲೆ ಮಾಡಿದ್ದ ಪ್ರಕರಣ ಇದೀಗ ರೋಚಕ ತಿರುವ ಪಡೆದುಕೊಂಡಿದ್ದು, 2ನೇ ಪತ್ನಿಯೇ ಆಸ್ತಿ ಗಾಗಿ ಕೊಲೆಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.  ಘಟನೆ ವಿವರ: ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ರೇಣುಕಾ ನಗರದ ನಿವಾಸಿ, ಗ್ರಾಪಂ ಮಾಜಿ ಸದಸ್ಯ ಶಫೀವುಲ್ಲಾ(60) ಅವರ ಪತ್ನಿ ನಿಧನರಾಗಿದ್ದರು.

ತನ್ನ ಮೂವರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿ ಒಂದೊಂದು ಮನೆಯನ್ನೂ ಕೊಟ್ಟು ನೆಮ್ಮದಿ ಜೀವನ ನಡೆಸುತ್ತಿದ್ದರು. ಈ ನಡುವೆ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಡಿಜಿಹಳ್ಳಿ ವ್ಯಾಪ್ತಿಯ ಸರಾಯಿಪಾಳ್ಯದ ನಜರಿನ್ ತಾಜ್(40) ಎಂಬಾಕೆಯನ್ನು ಶಫೀವುಲ್ಲಾ 2ನೇ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು.

ನಜರಿನ್ ತಾಜ್‍ಗೂ ಮೊದಲೇ ಮದುವೆ ಯಾಗಿದ್ದು, ಪತಿ ಮೃತಪಟ್ಟಿದ್ದರು. ಈಕೆಯ ಮಗ ಹಾಸ್ಟೆಲ್‍ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರೆ ಮಗಳು ತಾಯಿ ಜೊತೆಯೇ ಇದ್ದಾರೆ. ನಜರಿನ್ ತಾಜ್,ಶಫೀವುಲ್ಲಾ ಅವರನ್ನು ಎರಡನೇ ಮದುವೆಯಾದ ನಂತರ ಮಗಳನ್ನು ಕರೆದುಕೊಂಡು ಈತನ ಮನೆಯಲ್ಲೇ ವಾಸವಾಗಿದ್ದರು.  ಶಫೀವುಲ್ಲಾ ಆಸ್ತಿ ಮೇಲೆ ಕಣ್ಣು ಹಾಕಿದ ಜನರಿನ್ ತಾಜ್, ಕಳೆದ 6 ತಿಂಗಳಿನಿಂದ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳವಾಡುತ್ತಿದ್ದರು.

ಆಸ್ತಿಯನ್ನು ನಾನಿರುವವರೆಗೂ ನಿನ್ನ ಹೆಸರಿಗೆ ಮಾಡಲ್ಲ. ನಿನ್ನ ಮಗನನ್ನು ಚೆನ್ನಾಗಿ ಓದಿಸುತ್ತಿದ್ದೇನೆ, ಮಗಳಿಗೂ ಮದುವೆ ಮಾಡುತ್ತೇನೆ ಎಂದು ಹೇಳಿದರೂ ನಜರಿನ್ ತಾಜ್ ಕೇಳದೆ ಆಸ್ತಿಯನ್ನು ನನ್ನ ಹೆಸರಿಗೇ ಮಾಡುವಂತೆ ಒತ್ತಾಯಿಸುತ್ತಿದ್ದರೂ ಈಕೆಯ ಮಾತನ್ನು ಶಫಿವುಲ್ಲಾ ಒಪ್ಪಿರಲಿಲ್ಲ. ಹೇಗಾದರೂ ಮಾಡಿ ಶಫೀವುಲ್ಲಾ ನನ್ನ ಕೊಲೆ ಮಾಡಿಸಿ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳ ಬೇಕೆಂದು ಆಲೋಚನೆ ಮಾಡಿದ ನಜರಿನ್ ತಾಜ್, ಇದಕ್ಕಾಗಿ ತನ್ನ ಅಕ್ಕನ ಅಳಿಯ ಮುಬಾರಕ್‍ನನ್ನು ಸಂಪರ್ಕಿಸಿ ಕೊಲೆಗೆ ಸಂಚು ರೂಪಿಸುತ್ತಾರೆ.

ಅದರಂತೆ ಕಲೆದ ಐದ ದಿನಗಳ ಹಿಂದೆ ಮುಬಾರಕ್‍ನನ್ನು ಮನೆಗೆ ಕರೆಸಿಕೊಂಡು ಯಾವ ರೀತಿ ಕೊಲೆ ಮಾಡಬಹುದೆಂದು ಮನೆಯನ್ನು ತೋರಿಸುತ್ತಾರೆ. ಮುಬಾರಕ್ ಮನೆಯನ್ನು ಪರಿಶೀಲಿಸಿ ನಂತರ ಡಿ.ಜಿ.ಹಳ್ಳಿಗೆ ಹೋಗಿ ನಾಲ್ವರು ಸಹಚರರಿಗೆ ದುಡ್ಡಿನ ಆಸೆ ತೋರಿಸಿ ಅಂದು ರಾತ್ರಿ 9 ಗಂಟೆಗೆ ಕರೆತಂದಿದ್ದಾನೆ. ಶಫೀವುಲ್ಲಾ ಮನೆಯವರೆಲ್ಲ ಊಟ ಮಾಡಿ ಕುಳಿತಿದ್ದಾಗ ಮುಬಾರಕ್ ಇವರ ಮನೆಯ ಕಾಲಿಂಗ್ ಬೆಲ್ ಒತ್ತಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಮುಬಾರಕ್ ಹಾಗೂ ಸಹಚರರು ಒಳಗೆ ನುಗ್ಗಿ ತಾಯಿ-ಮಗಳನ್ನು ಕೂಡಿ ಹಾಕಿ ಶಫೀವುಲ್ಲಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಕೆಲ ಸಮಯದ ಬಳಿಕ ತಾಯಿ ಮಗಳು ಕೂಗಾಡಿಕೊಂಡು ಹೊರಗೆ ಬಂದು ನೆರೆಹೊರೆಯವರಿಗೆ, ಯಾರೊ ನಮ್ಮನ್ನು ಕೂಡಿ ಹಾಕಿ ಪತಿಯನ್ನು ಕೊಲೆ ಮಾಡಿದರು ಎಂದು ಕಥೆ ಕಟ್ಟಿದ್ದಾರೆ.  ವಿಷಯ ತಿಳಿದ ಪಟ್ಟಣದ ಠಾಣೆಪೊಲೀಸರು ಅಂದು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಶಫಿವುಲ್ಲಾ ಅವರ 2ನೇ ಪತ್ನಿ ನಜರಿನ್ ತಾಜ್ ಮೇಲೆ ಸಂಶಯ ಬಂದು ವಿಚಾರಣೆಗೊಳಪಡಿಸಿದಾಗ ಆಸ್ತಿಗಾಗಿ ತಾನೇ ಸಂಬಂಧಿಯನ್ನು ಕರೆಸಿಕೊಂಡು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಹೇಳಿಕೆ ಮೇರೆಗೆ ಈಕೆಯನ್ನು ಬಂಧಿಸಿದ್ದು, ಮುಬಾರಕ್‍ನನ್ನು ವಶಕ್ಕೆ ಪಡೆದು ಈತನ ಸಹಚರರಿಗಾಗಿ ಬಲೆ ಬೀಸಿದ್ದಾರೆ.

Facebook Comments