ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ 12 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.11- ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ 12 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಲ್ಲೇಶ್ವರಂ ಎಂ.ಡಿ. ಬ್ಲಾಕ್ ನಿವಾಸಿ ಸೈಯದ್ ರಾಹಿಲ್(27) ಬಂಧಿತ ಆರೋಪಿಯಾಗಿದ್ದು, ಈತನಿಂದ ಕೃತ್ಯಕ್ಕೆ ಬಳಸಿದ್ದ ಸ್ವಿಪ್ಟ್‍ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪುರದಲ್ಲಿ ಶಬಿತ ಶಣೈ ಎಂಬುವರು ವಾಸವಾಗಿದ್ದು, ಇವರ ಸಹೋದರ ಸುದೀಪ್ ಮತ್ತು ತಾಯಿ ಮಲ್ಲೇಶ್ವರಂನ ಎಂ.ಡಿ.ಬ್ಲಾಕ್‍ನಲ್ಲಿ ವಾಸವಾಗಿದ್ದಾರೆ.  ಸುದೀಪ್ ಅವರು ಶಬಿತಾರ ಮನೆಗೆ ಬಂದುಹೋಗುತ್ತಿದ್ದನು. ಫೆ.8ರಂದು ಶಬಿತ ಸಂಬಂಧಿಕರ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಸುದೀಪ್ ಇವರ ಮನೆಗೆ ಬಂದಿದ್ದನು. ಮದುವೆ ಮುಗಿಸಿಕೊಂಡು ಶಬಿತ ಮನೆಗೆ ಬಂದಾಗ ಸುದೀಪ್ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ವಿಚಾರಿಸಿದರೂ ಈತನ ಸುಳಿವು ಸಿಕ್ಕಿರಲಿಲ್ಲ.

ಈ ನಡುವೆ ಫೆ.9ರಂದು ಬೆಳಗ್ಗೆ 9.30ರ ಸುಮಾರಿನಲ್ಲಿ ಶಬಿತ ಅವರ ಮೊಬೈಲ್‍ಗೆ ಕರೆ ಬಂದಿದ್ದು, ಸುದೀಪ್ ಮಾತನಾಡಿ ತನ್ನನ್ನು ಕೆಲವರು ಹೊಡೆದು ಕಾರಿನಲ್ಲಿ ಕರೆದೊಯ್ದು ಗೋರಿಪಾಳ್ಯದ ಸ್ಮಶಾನದಲ್ಲಿ ಇಟ್ಟುಕೊಂಡಿರುತ್ತಾರೆ ಎಂದೇಳಿ ದೂರವಾಣಿ ಸ್ಥಗಿತಗೊಳಿಸಿದಾನೆ. ಮತ್ತೆ ಪುನಃ 11 ಗಂಟೆಗೆ ಶಬಿತ ಅವರ ಮೊಬೈಲ್‍ಗೆ ಮತ್ತೆ ಕರೆ ಬಂದಿದ್ದು, ಸುದೀಪ್‍ನಿಂದ ಮಾತನಾಡಿಸಿ 12 ಲಕ್ಷ ನೀಡಿದರೆ ಈತನನ್ನು ಬಿಡುವುದಾಗಿ ಹೇಳಿ ಫೋನ್ ಕಟ್ ಮಾಡಿದ್ದಾರೆ.

ತಕ್ಷಣ ಶಬಿತ ಅವರು ಮಲ್ಲೇಶ್ವರಂ ಠಾಣೆಗೆ ತೆರಳಿ ಸಹೋದರನ ಅಪಹರಣದ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪಹರಣಕಾರರ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ಸಯ್ಯದ್ ರಾಹಿಲ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಪ್ರಕರಣದಲ್ಲಿ ಈತನ ಸಹಚರ ಸುಲ್ತಾನ್ ಮತ್ತು ಆತನ ಸ್ನೇಹಿತರು ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸೈಯದ್ ರಾಹಿಲ್ ಮತ್ತು ಸುದೀಪ್ ಐದು ವರ್ಷಗಳಿಂದ ಸ್ನೇಹಿತರಾಗಿದ್ದು, ಸುದೀಪನ ಬಳಿ ಹಣವಿದೆ ಎಂದು ಸ್ನೇಹಿತರೊಂದಿಗೆ ಸೇರಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.

ಸುದೀಪನನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟರೆ ದುಡ್ಡು ಕೊಟ್ಟು ಬಿಡಿಸಿಕೊಂಡು ಹೋಗುತ್ತಾರೆಂದು ಅಪಹರಿಸಿ ದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ಯ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಚಂದ್ರಕಾಂತ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments