ಹೆಗ್ಗನಹಳ್ಳಿ ಪ್ರಕರಣ ಡಬಲ್ ಡೆಡ್ ಬಾಡಿ ಪ್ರಕರಣಕ್ಕೆ ಟ್ವಿಸ್ಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.12- ರಾಜಗೋಪಾಲನಗರದ ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಅಹಿಕತರ ಘಟನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್ ಮತ್ತು ಪುತ್ರಿ ಚೈತ್ರಾ ಅವರಿಗೆ ಪ್ರಜ್ಞೆ ಬಂದ ನಂತರವಷ್ಟೇ ಘಟನೆ ಹೇಗಾಯಿತು, ಯಾವ ಕಾರಣಕ್ಕಾಗಿ ರಂಗಧಾಮಯ್ಯ ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬರಲಿದೆ.  ಇವರಿಬ್ಬರಿಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ಹೆಗ್ಗನಹಳ್ಳಿ 8ನೇ ಕ್ರಾಸ್‍ನಲ್ಲಿ ಎರಡು ಅಂತಸ್ತಿನ ಮನೆ ಹೊಂದಿರುವ ಶಿವರಾಜ್ ಅವರ ಮನೆಗೆ ಬಾಡಿಗೆಗಿದ್ದ ರಂಗಧಾಮಯ್ಯ ಒಂಟಿಯಾಗಿದ್ದರಿಂದ ಈತನಿಗೆ ಉಪಚಾರ ಮಾಡಿದ್ದೇ ಮನೆ ಮಾಲೀಕರಿಗೆ ಮುಳುವಾಗಿ ಪರಿಣಮಿಸಿದೆ.  ಪಾಶ್ವವಾಯು ಪೀಡಿತರಾಗಿರುವ ಶಿವರಾಜ್ ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿ ಕೊಂಡು ಪತ್ನಿ ಲಕ್ಷ್ಮಿ(34) ರಂಗಧಾಮಯ್ಯ ಜೊತೆ ಸಲುಗೆಯಿಂದ ಇದ್ದುದ್ದೇ ಆಕೆಯ ಪ್ರಾಣಕ್ಕೂ ಕುತ್ತು ತಂದೊಡ್ಡಿ, ಇದೀಗ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ನಿನ್ನೆ ಮಧ್ಯಾಹ್ನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿ ಗಾರ್ಮೆಂಟ್ಸ್ ಉದ್ಯೋಗಿ ಲಕ್ಷ್ಮಿ ಕೊಲೆಯಾಗಿದ್ದರು. ಅಲ್ಲದೆ ಇವರ ಪತಿ ಶಿವರಾಜ್ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದಾರಲ್ಲದೆ ಪುತ್ರಿ ಚೈತ್ರಾ ಸಹ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.  ಈ ಸಂದರ್ಭದಲ್ಲಿ ಇವರ ಮನೆಗೆ ಬಂದಿದ್ದ ಲಕ್ಷ್ಮಿ ಅವರ ಸ್ನೇಹಿತೆ ಘಟನೆಯನ್ನು ಕಂಡು ತಕ್ಷಣ ನೆರೆಹೊರೆಯವರ ಸಹಾಯದಿಂದ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸುವಾಗ ಇವರ ಮನೆಯ ಮೇಲೆ ವಾಸವಾಗಿದ್ದ ರಂಗಧಾಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಘಟನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ನೆರೆಹೊರೆಯವರಿಂದ ಮಾಹಿತಿ ಕಲೆ ಹಾಕಿದ್ದು, ರಂಗಧಾಮಯ್ಯನೇ ಈ ಕೃತ್ಯವೆಸಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಒಟ್ಟಾರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಶಿವರಾಜ್ ಮತ್ತು ಅವರ ಪುತ್ರಿ ಚೈತ್ರಾಳಿಗೆ ಪ್ರಜ್ಞೆ ಬಂದ ನಂತರವಷ್ಟೇ ಪೂರ್ಣ ಮಾಹಿತಿ ಲಭ್ಯವಾಗಲಿದೆ.

Facebook Comments