ಕಬಾಬ್ ವ್ಯಾಪಾರಿಯನ್ನು ಕೊಂದಿದ್ದ ನಾಲ್ವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಕಬಾಬ್ ಅಂಗಡಿ ಮಾಲೀಕನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಉತ್ತರ ವಿಭಾಗದ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಜಾವಗಲ್ ನಿವಾಸಿ ರವೀಶ (44), ಹೊಳೆನರಸೀಪುರದ ಜಿತೇಂದ್ರ (30), ಕಡೂರು ತಾಲೂಕಿನ ಸಖರಾಯಪಟ್ಟಣ ನಿವಾಸಿ ಸುಮಂತರಾಜ್ (29) ಮತ್ತು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪ್ರದೀಪ್‍ಕುಮಾರ್ (40) ಬಂಧಿತ ಆರೋಪಿಗಳು.

ಈ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.  ಮಂಡ್ಯ ಮೂಲದ ಉಮೇಶ್ ಎಂಬುವವರು ಶ್ರೀಗಂಧ ನಗರದ ಹೆಗ್ಗನಹಳ್ಳಿ 2ನೆ ಕ್ರಾಸ್‍ನಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. 13 ವರ್ಷಗಳ ಹಿಂದೆ ರೂಪಾ ಎಂಬುವವರನ್ನು ಉಮೇಶ್ ಮದುವೆಯಾಗಿದ್ದರು.

ಈಮಧ್ಯೆ ಆರೋಪಿ ಕಿಶೋರ್ ಉಮೇಶನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಕೆಲ ದಿನಗಳ ನಂತರ ಇವರಿಬ್ಬರು ಯಾವುದೋ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು.

ಈ ಹಿಂದೆ ಕಿಶೋರ್ ರೂಪಾಳೊಂದಿಗೆ ಇದ್ದ ವಿಡಿಯೋವನ್ನು ಆಕೆಗೆ ಗೊತ್ತಿಲ್ಲದಂತೆ ಚಿತ್ರೀಕರಿಸಿ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದನು. ಈ ಸಂಬಂಧ ರೂಪಾ ಮತ್ತು ಪತಿ ಉಮೇಶ್ ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಿಶೋರ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ತದನಂತರ ಕಿಶೋರ್ ಜಾಮೀನಿನ ಮೇಲೆ ಹೊರಗೆ ಬಂದಾಗ ಉಮೇಶ್ ಹಾಗೂ ರೂಪಾ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಮೂರ್ನಾಲ್ಕು ಮಂದಿ ಸಹಚರರೊಂದಿಗೆ ಉಮೇಶನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಮೇ 12ರಂದು ರಾತ್ರಿ 9.30ರ ಸಮಯದಲ್ಲಿ ಉಮೇಶ್ ಅಂಗಡಿಯಲ್ಲಿದ್ದಾಗ ಕಿಶೋರ್ ತನ್ನ ಸಹಚರರೊಂದಿಗೆ ಸೇರಿಕೊಂಡು ಉಮೇಶ್ ಕಣ್ಣಿಗೆ ಕಾರದ ಪುಡಿ ಎರಚಿ ಲಾಂಗು ಮತ್ತು ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದನು.

ಈ ಬಗ್ಗೆ ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡು ನಾಲ್ವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಕಿಶೋರ್‍ಗಾಗಿ ಪತ್ತೆಕಾರ್ಯ ಪ್ರಗತಿಯಲ್ಲಿದೆ.

ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ದಿನೇಶ್ ಪಾಟೀಲ್ ಅವರನ್ನೊಳಗೊಂಡ ಸಿಬ್ಬಂದಿ ವರ್ಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ