ಬಹುಮಾನದ ಆಸೆಗೆ 1.67 ಕೋಟಿ ಕಳೆದುಕೊಂಡ ವೃದ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.15-ಪ್ರತಿಷ್ಠಿತ ಕಂಪನಿಯೊಂದರ ಹೆಸರಿನಲ್ಲಿ ಬಹುಮಾನದ ಆಸೆ ತೋರಿಸಿ ವೃದ್ಧೆಗೆ 1.67 ಕೋಟಿ ರೂ. ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಅಂಬುಜಾಕ್ಷಿ(60) ನಯ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡ ವೃದ್ಧೆ. ಕಳೆದ ವರ್ಷ ಡಿಸೆಂಬರ್ 21 ರಂದು ಅಂಬುಜಾಕ್ಷಿ ಅವರ ಮೊಬೈಲ್‍ಗೆ ಸ್ಯಾಮ್‍ಸಂಗ್ ಕಂಪನಿ ಏಜೆಂಟ್ ಎಂದು ಹೇಳಿಕೊಂಡು ಬ್ರೌನ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಫೋನ್ ಮಾಡಿದ್ದಾನೆ.

ತಾನು ಲಂಡನ್‍ನಿಂದ ಬಂದಿದ್ದು, ದೆಹಲಿಯಲ್ಲಿ ವಾಸವಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ವೃದ್ಧೆಗೆ ಕಂಪನಿಯ ಲಕ್ಕಿ ಡಿಪ್‍ನಲ್ಲಿ ನಿಮ್ಮ ಮೊಬೈಲ್ ನಂಬರ್ ಸೆಲೆಕ್ಟ್ ಆಗಿದ್ದು 10 ಲಕ್ಷ ಪೌಂಡ್ (93 ಕೋಟಿ ರೂ.) ಬಹುಮಾನ ಬಂದಿದೆ ಎಂದು ಹೇಳಿದ್ದಾನೆ. ಅಂಬುಜಾಕ್ಷಿ ಈತನ ಮಾತನ್ನು ನಂಬಿದ್ದಾರೆ. 93 ಕೋಟಿ ರೂ. ಹಣ ಸಿಗಬೇಕಾದರೆ ಮೊದಲು ನೀವು 79 ಸಾವಿರ ರೂ. ಠೇವಣಿ ಇಡಬೇಕು ಎಂದು ಹೇಳಿದ್ದು, ಬ್ಯಾಂಕ್ ಖಾತೆಯೊಂದಕ್ಕೆ ಠೇವಣಿ ಇಡಲಾಗಿದೆ.

ಅನಂತರ ಬೇರೆ ಬೇರೆ ಮೊಬೈಲ್ ನಂಬರ್‍ಗಳಿಂದ ಕರೆ ಮಾಡಿದ್ದು, ಒಟ್ಟು 1.67 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ಹಾಕಿಸಿಕೊಂಡಿದ್ದಾನೆ. ಹಣವೆಲ್ಲ ಹಾಕಿದ ಬಳಿಕ ಅನಾಮಧೇಯನ ಫೋನ್ ನಾಟ್ ರೀಚೆಬಲ್ ಆಗಿದೆ. ಈ ಬಗ್ಗೆ ಅನುಮಾನಗೊಂಡ ವೃದ್ಧೆ ಸ್ಯಾಮ್‍ಸಂಗ್ ಕಂಪನಿಗೆ ಕರೆ ಮಾಡಿ ಲಾಟರಿ ಬಗ್ಗೆ ವಿಚಾರಣೆ ನಡೆಸಿದಾಗ ಅಂತಹ ದುಬಾರಿ ಮೊತ್ತದ ಬಹುಮಾನ ನಮ್ಮಲ್ಲಿಲ್ಲ ಎಂಬ ಉತ್ತರ ಸಿಕ್ಕಿದೆ. ತಾವು ವಂಚನೆಗೊಳಗಾಗಿರುವುದನ್ನು ಅರ್ಥ ಮಾಡಿಕೊಂಡ ವೃದ್ಧೆ ತಕ್ಷಣ ಸೈಬರ್ ಫೋಲೀಸ್ ಠಾಣೆಗೆ ತೆರಳಿ ಫೆ.1ರಂದು ದೂರು ನೀಡಿದ್ದಾರೆ.

Facebook Comments